ದಾವಣಗೆರೆ: ಎಲ್ಲರ ಸಮಸ್ಯೆಗಳನ್ನು ದೂರ ಮಾಡುವವನು ಈ ಕೊಣಚಕಲ್ ರಂಗನಾಥ ಸ್ವಾಮಿ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಮೆದುವಿನಕೆರೆ ಬಳಿಯ ಕೊಣಚಕಲ್ ರಂಗನಾಥ ಸ್ವಾಮಿ ಭಕ್ತರಿಗೆ ಅಚ್ಚುಮೆಚ್ಚು. ಇಂತಹ ಸಮಸ್ಯೆ ಎಂದು ಹೇಳಿಕೊಂಡು ಕೊಣಚಕಲ್ ರಂಗನಾಥ ಸ್ವಾಮಿ ಬೆಟ್ಟಕ್ಕೆ ಭಕ್ತರು ಆಗಮಿಸಿ ತಮ್ಮ ಬೇಡಿಕೆ ದೇವರ ಮುಂದಿಟ್ಟರೆ ಸಾಕು ಸಮಸ್ಯೆ ದೂರ ಆಗುತ್ತದೆ ಎಂಬುದು ಭಕ್ತರ ನಂಬಿಕೆ.
ಅಲ್ಲದೇ ಹರಕೆ ಕಟ್ಟಿಕೊಂಡು ಕರು ತಂದು ಈ ದೇವರಿಗೆ ಬಿಟ್ಟರೆ ಸಾಕು ಎಂತಹ ಸಮಸ್ಯೆಯಿದ್ದರೂ ದೂರ ಆಗುತ್ತದೆ. ಹೀಗೆ ಸಮಸ್ಯೆ ಎಂದು ಬರುವವರ ಕೈಹಿಡಿದು ಸುತ್ತ ಹತ್ತು ಹಳ್ಳಿಗಳನ್ನು ಕಾಯುತ್ತಿದ್ದಾನೆ ಈ ಶ್ರೀ ಕೊಣಚಕಲ್ ರಂಗನಾಥ ಸ್ವಾಮಿ ಎನ್ನುತ್ತಾರೆ ಭಕ್ತರು.

13- 14ನೇ ಶತಮಾನದ ದೇವಾಲಯ: ಕೊಣಚಕಲ್ ಶ್ರೀ ರಂಗನಾಥ ಸ್ವಾಮಿ ಧಾರ್ಮಿಕವಾಗಿ ನೆಲೆನಿಂತು ಶತ ಶತಮಾನಗಳಿಂದ ಭಕ್ತರನ್ನು ಕಾಯುತ್ತಿದ್ದಾನೆ. ಕಷ್ಟ ಎಂದು ಬರುವ ಭಕ್ತರಿಗೆ ಕಷ್ಟ ದೂರ ಮಾಡಿ ಕಳಿಸುವ ಪವಾಡ ಈ ಸ್ವಾಮಿಗಿದೆ ಎಂಬುದು ಭಕ್ತರ ನಂಬಿಕೆ. ವಿಶೇಷವಾಗಿ ಈ ಬೆಟ್ಟದಲ್ಲಿ ಪಾಳೇಗಾರರು ದೇವಾಲಯ ನಿರ್ಮಾಣ ಮಾಡಿದ್ದರು ಎಂದು ಸ್ಥಳೀಯರು ಹೇಳುತ್ತಾರೆ. ಇಲ್ಲಿ ನಿರ್ಮಾಣವಾದ ಕಲ್ಯಾಣಿ, 17ನೇ ಶತಮಾನದ ಅನುಭವಾಮೃತ ಕವಿ ಮಹಲಿಂಗರಂಗರ ಸಮಾಧಿ, ಕೊಣಚಕಲ್ ರಂಗನಾಥಸ್ವಾಮಿ ದೇವಾಲಯ ಜಿಲ್ಲೆಯ ಮತ್ತು ಹೊರ ಜಿಲ್ಲೆಗಳ ಸಾವಿರಾರು ಭಕ್ತರು ಬಂದು ಹೋಗುವ ಧಾರ್ಮಿಕ ಶ್ರದ್ದಾ ಕೇಂದ್ರಗಳಾಗಿದೆ.

ಸ್ವಾಮಿಯ ಪವಾಡಕ್ಕೆ ಮನಸೋತ ಭಕ್ತರು ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಹಾವೇರಿ, ಬಳ್ಳಾರಿ, ಹೊಸಪೇಟೆ, ರಾಯಚೂರು ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಬಂದು ಹೋಗುತ್ತಾರೆ. 13-14 ನೇ ಶತಮಾನದಲ್ಲಿ ದೇವಾಲಯ ನಿರ್ಮಾಣ ಆಗಿರಬಹುದು ಎಂದು ದೇವಾಲಯ ಪೋಷಣೆ ಮಾಡುವ ಕುಮಾರ್ ಎಂಬುವರು ಮಾಹಿತಿ ನೀಡಿದರು.
ಹರಕೆ ಕಟ್ಟಿಕೊಂಡರೆ ಏನೆಲ್ಲಾ ಸಮಸ್ಯೆ ದೂರ ಆಗುತ್ತೆ: ಅರ್ಚಕ ರಂಗಸ್ವಾಮಿ ಅವರು ಈಟಿವಿ ಭಾರತ್ಗೆ ಪ್ರತಿಕ್ರಿಯಿಸಿ “ದೇವರಿಗೆ ಹರಕೆ ಮಾಡಿಕೊಂಡರೆ ಒಳ್ಳೆದಾಗುತ್ತದೆ. ಭೂತಪ್ಪ ಬಿಟ್ಟಿರುವ ಸಮಸ್ಯೆ, ದ್ವಿಚಕ್ರ ವಾಹನದಲ್ಲಿ ಬಿದ್ದು ಆರೋಗ್ಯ ಹದಗೆಟ್ಟಿದ್ದು, ಚೌಡಿ ಬಿಟ್ಟಿರುವ ಸಮಸ್ಯೆ, ಗಾಳಿ ಸೋಕು, ಮನೆಯಲ್ಲಿ ಸಮಸ್ಯೆಗಳು ಸೇರಿದಂತೆ ದೇವಾಲಯದ ಅರ್ಚಕರಿಗೆ ಕೇಳಿಸಿ ನೀರು ಹಾಕಿಸಿಕೊಂಡರೆ ಆ ರಂಗನಾಥ ಸ್ವಾಮಿ ಸರಿ ಮಾಡ್ತಾನೆ ಎಂಬ ನಂಬಿಕೆ ಭಕ್ತರದ್ದಾಗಿದೆ. ಹರಕೆ ಮಾಡಿಕೊಂಡರೆ ಎಲ್ಲಾ ಸಮಸ್ಯೆ ಬಗೆಹರಿಸುತ್ತಾನೆ. ಮನೆಯಲ್ಲಿ ಹಸು ಕರು ಹಾಕಿದರೆ, ಅದನ್ನು ತಂದು ಇಲ್ಲಿ ಬಿಟ್ಟು ಹೋಗ್ತಾರೆ. ಅವು ದೇವಾಲಯದಲ್ಲಿ ದೊಡ್ಡದಾದ ಬಳಿಕ ಅದನ್ನು ಹರಾಜು ಹಾಕಿ ಸರ್ಕಾರಕ್ಕೆ ಹಣ ಸಂದಾಯ ಮಾಡಲಾಗುತ್ತದೆ. ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಹಾವೇರಿ, ಬಳ್ಳಾರಿ, ಹೊಸಪೇಟೆ, ರಾಯಚೂರು, ದೂರ ದೂರದಿಂದ ಬರುತ್ತಾರೆ” ಎಂದರು.
ಪೂಜೆ ಮಾಡಿಸಿ ಕರುಗಳನ್ನು ಬಿಡುವ ಹರಕೆ: ದೇವಸ್ಥಾನವನ್ನು ಪೋಷಣೆ ಮಾಡುತ್ತಿರುವ ಕುಮಾರ್ ಎಂಬುವರು ಈಟಿವಿ ಭಾರತ್ಗೆ ಪ್ರತಿಕ್ರಿಯಿಸಿ “13 ಮತ್ತು 14 ನೇ ಶತಮಾನದಲ್ಲಿ ನಿರ್ಮಾಣವಾದ ಐತಿಹಾಸಿಕ ದೇವಾಲಯ ಎಂಬ ಪ್ರತೀತಿ ಇದೆ. ಇಲ್ಲಿ ಶ್ರದ್ಧಾಭಕ್ತಿಯಿಂದ ಧಾರ್ಮಿಕ ಆಚರಣೆಗಳು ಆಗುತ್ತದೆ. ಸಮಸ್ಯೆ ಇದ್ದವರು ರಂಗನಾಥ ಸ್ವಾಮಿ ಸನ್ನಿಧಿಯಲ್ಲಿ ನೀರು ಹಾಕಿಸಿಕೊಂಡರೆ ಸಮಸ್ಯೆ ಪರಿಹಾರ ಆಗಲಿದೆ. ಈ ತಿಂಗಳ ಚೈತ್ರ ಮಾಸದಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತದೆ. ಕಷ್ಟಕಾರ್ಪಣ್ಯಗಳನ್ನು ಬಗೆಹರಿಸಿಕೊಳ್ಳಲು ಹರಕೆ ಕಟ್ಟಿಕೊಳ್ಳುತ್ತಾರೆ. ಕಾಯಿಲೆ, ಮನೆಯಲ್ಲಿ ತಾಪತ್ರಯ ಸಮಯದಲ್ಲಿ ಹರಕೆ ಕಟ್ಟಿಕೊಳ್ಳುತ್ತಾರೆ. ಹರಕೆ ಮಾಡಿಕೊಂಡವರು ಒಳ್ಳೆದಾದರೆ ಪೂಜೆ ಮಾಡಿಸಿ ಹಸುಗಳನ್ನು, ಕರುಗಳನ್ನು ಇಲ್ಲೇ ಬಿಟ್ಟು ಹೋಗುವ ಹರಕೆ ಇದೆ. ಒಳ್ಳೆದಾಗಿರುವುದನ್ನು ನಾನು ನೋಡಿದ್ದೇನೆ. ಯಾವಾಗಾದರು ಬಂದು ಮೂರು ನೀರು ಇಲ್ಲ, ಐದು ನೀರು ಹಾಕಿಸಿಕೊಂಡು ಹೋಗ್ತಾರೆ ಅಂತಹವರಿಗೂ ಒಳ್ಳೆದಾಗಿದೆ” ಎಂದು ಹೇಳಿದರು.