ಚಿಕ್ಕೋಡಿ (ಬೆಳಗಾವಿ): ಕಬ್ಬಿನ ಬೆಳೆಯ ಮಧ್ಯೆ ಅಕ್ರಮವಾಗಿ ಗಾಂಜಾ ಬೆಳೆದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ 20 ಲಕ್ಷಕ್ಕೂ ಹೆಚ್ಚು ಮೌಲ್ಯದ 441 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಬೆಳಗಾವಿ ಸೈಬರ್ ಮತ್ತು ರಾಯಭಾಗ ಪೊಲೀಸರು ಜಂಟಿವಾಗಿ ಈ ಕಾರ್ಯಾಚರಣೆ ನಡೆಸಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದ ಸಿಂಗಾಡಿ ಮಾಳಪ್ಪ ಹಿರೇಕೋಡಿ ಬಂಧಿತ ಆರೋಪಿ. ಇವರು ತಮ್ಮ ಒಂದು ಎಕರೆ ಕಬ್ಬಿನ ಗದ್ದೆಯ ಮಧ್ಯೆ ಅಕ್ರಮವಾಗಿ ಗಾಂಜಾ ಬೆಳೆ ಬೆಳೆದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ಖಚಿತ ಮಾಹಿತಿ ಮೇರೆಗೆ ಬೆಳಗಾವಿ ಸೈಬರ್ ಮತ್ತು ರಾಯಭಾಗ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಪತ್ತೆ ಮಾಡಿದ್ದಾರೆ.
ಈ ಕುರಿತು ಬೆಳಗಾವಿ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಎಸ್ಪಿ ಭೀಮಾಶಂಕರ್ ಗುಳೇದ, ಕಬ್ಬಿನ ಗದ್ದೆಯಲ್ಲಿ ಅಕ್ರಮವಾಗಿ ಬೆಳೆದಿದ್ದ 441 ಕೆಜಿ ತೂಕದ ಗಾಂಜಾ ಜಪ್ತಿ ಮಾಡಲಾಗಿದೆ. ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಸದ್ಯ ಆತ ನ್ಯಾಯಾಂಗ ಬಂಧನಲ್ಲಿದ್ದಾನೆ ಎಂದು ತಿಳಿಸಿದರು.
ಸಿಂಗಾಡಿ ಮಾಳಪ್ಪ ಹಿರೇಕೋಡಿ ತಮ್ಮ ಒಂದು ಎಕರೆ ಕಬ್ಬಿನ ಹೊಲದಲ್ಲಿ ಗಾಂಜಾ ಬೆಳೆದಿದ್ದ. ಅಂದಾಜು 20 ರಿಂದ 22ಲಕ್ಷ ರೂಪಾಯಿ ಮೌಲ್ಯದ ಗಾಂಜಾ ಪತ್ತೆಯಾಗಿದೆ. ಜಿಲ್ಲೆಯಲ್ಲಿ ನಡೆದ ಅತಿ ದೊಡ್ಡ ದಾಳಿ ಇದಾಗಿದೆ. ಭಾರಿ ಪ್ರಮಾಣದಲ್ಲಿ ಗಾಂಜಾ ಪತ್ತೆಯಾಗಿದ್ದರಿಂದ ಈ ಇದರಲ್ಲಿ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ತನಿಖೆ ಕೈಗೊಂಡಿದ್ದೇವೆ ಎಂದು ಎಸ್ಪಿ ಮಾಹಿತಿ ನೀಡಿದರು.
ಈ ಗಾಂಜಾ ಎಲ್ಲೆಲ್ಲಿ ರವಾನೆ ಆಗುತ್ತಿತ್ತು, ಈ ಮೊದಲು ಯಾರಿಗೆಲ್ಲ ಮಾರಾಟ ಮಾಡುತ್ತಿದ್ದರು ಎಂಬುದರ ಬಗ್ಗೆ ಅಥಣಿ ಡಿವೈಎಸ್ಪಿ ಅವರು ತನಿಖೆ ಕೈಗೊಂಡಿದ್ದಾರೆ. ಆರೋಪಿ ಈ ಹಿಂದೆ ಕೂಡ ಗಾಂಜಾ ಬೆಳೆದಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಆದರೆ ಈ ಕುರಿತು ತನಿಖೆ ಪ್ರಗತಿಯಲ್ಲಿದೆ ಎಂದು ಎಸ್ಪಿ ಮಾಹಿತಿ ನೀಡಿದರು.