ಕಲಬುರಗಿ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಕಲಬುರಗಿ ಜಿಲ್ಲೆ ಅಕ್ಷರಶಃ ತತ್ತರಿಸಿದೆ. ಮಳೆ ಹೊಡೆತಕ್ಕೆ ತೊಗರಿನಾಡಿನ ರೈತರು ಕಷ್ಟುಪಟ್ಟು ಬೆಳೆದಿದ್ದ ಬೆಳೆ ನಾಶವಾಗಿದ್ದು, ಹಲವು ಕಡೆ ಅವಾಂತರ ಸೃಷ್ಟಿಯಾಗಿದೆ.
ಯಡ್ರಾಮಿ ಪಟ್ಟಣದ ಹಳೆ ಬಜಾರ್ ಬಡಾವಣೆಯಲ್ಲಿ ಹಳೆಯ ಕಲ್ಲಿನ ಗೋಡೆ ಕುಸಿದು 17 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಇದೇ ವೇಳೆ ಮನೆಯಲ್ಲಿದ್ದ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮತ್ತೊಂದೆಡೆ, ಬೆಣ್ಣೆತೋರಾ ಜಲಾಶಯ ಸಂಪೂರ್ಣ ಭರ್ತಿಯಾಗಿರುವುದರಿಂದ 55 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗಿದ್ದು, ಹಳೆ ಹೆಬ್ಬಾಳ ಗ್ರಾಮ ಸಂಪೂರ್ಣ ಜಲಾವೃತವಾಗಿದೆ. ಗ್ರಾಮದ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ದಿನಸಿ ವಸ್ತುಗಳು, ದವಸಧಾನ್ಯ, ಗೃಹೋಪಯೋಗಿ ವಸ್ತುಗಳು ನೀರು ಪಾಲಾಗಿವೆ. ನಿವಾಸಿಗಳು ಹರಸಾಹಸ ಪಟ್ಟು ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ.
ನದಿಯಲ್ಲಿ ಕೊಚ್ಚಿಹೋಗಿದ್ದ ಯುವಕ ಶವವಾಗಿ ಪತ್ತೆ: ಬಟ್ಟೆ ತೊಳೆಯಲು ಹೋಗಿ ಆಯತಪ್ಪಿ ನದಿಗೆ ಬಿದ್ದು ಕೊಚ್ಚಿಹೋಗಿದ್ದ ಯುವಕ, ಸೊನ್ನ ಬ್ಯಾರೇಜ್ ಬಳಿ ಶವವಾಗಿ ಪತ್ತೆಯಾಗಿದ್ದಾನೆ. ಅಫ್ಜಲ್ಪುರ ತಾಲೂಕಿನ ಮಣ್ಣೂರು ಗ್ರಾಮದ ಭಾಗೇಶ್ ಬರುಡ (20) ಮೃತರು. ಈ ಸಂಬಂಧ ಅಫ್ಜಲ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
1.5 ಲಕ್ಷಕ್ಕೂ ಹೆಚ್ಚು ಎಕರೆ ಬೆಳೆ ನಾಶ: ಮಳೆಯ ಆರ್ಭಟದಿಂದ ಜಿಲ್ಲೆಯಾದ್ಯಂತ ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ಸೇತುವೆಗಳು ಜಲಾವೃತಗೊಂಡು ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಸುಮಾರು 1.5 ಲಕ್ಷಕ್ಕೂ ಹೆಚ್ಚು ಎಕರೆ ಬೆಳೆ ನಾಶವಾಗಿದ್ದು, ರೈತರು ಕಂಗಾಲಾಗಿದ್ದಾರೆ.
ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ 2 ಲಕ್ಷ ಕ್ಯೂಸೆಕ್ ನೀರು ಹರಿಸಿರುವುದರಿಂದ ಮಣ್ಣೂರಿನ ಯಲ್ಲಮ್ಮ ದೇವಸ್ಥಾನದ ಸೇತುವೆ ಹಾಗೂ ದೇವಸ್ಥಾನ ಮುಳುಗಡೆಯಾಗಿದೆ.
ಚಿಂಚೋಳಿ ತಾಲೂಕಿನ ಮುಲ್ಲಾಮಾರಿ ಜಲಾಶಯದಿಂದ 4 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿರುವ ಹಿನ್ನೆಲೆ ಚಿಮ್ಮನಚೋಡ್-ತಾಜಲಾಪುರ, ಕನಕಪುರ, ನಿಮಾಹೊಸಳ್ಳಿ, ಗರಂಪಳ್ಳಿ, ಗರಗಪಳ್ಳಿ ಸೇರಿದಂತೆ ಹಲವು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಬೃಹತ್ ಸೇತುವೆ ಜಲಾವೃತಗೊಂಡಿದೆ. ಸೇತುವೆ ಮೇಲೆ ಎರಡು ಅಡಿಗೂ ಹೆಚ್ಚು ನೀರು ಹರಿಯುತ್ತಿರುವುದರಿಂದ ಸಂಚಾರ ಸ್ಥಗಿತಗೊಂಡಿದ್ದು, ಅಪಾಯವನ್ನು ಲೆಕ್ಕಿಸದೆ ಕೆಲ ವಾಹನ ಸವಾರರು ಸೇತುವೆ ದಾಟಲು ಮುಂದಾಗುತ್ತಿದ್ದಾರೆ.
ಧಾರಾಕಾರ ಮಳೆಗೆ ಜಿಲ್ಲೆಯ ಹಲವೆಡೆ ಬಾವಿಗಳು ತುಂಬಿ ಹರಿಯುತ್ತಿವೆ. ಇತ್ತ ಆಳಂದ ತಾಲೂಕಿನ ಮಾದನಹಿಪ್ಪರಗಾ ಗ್ರಾಮದಲ್ಲಿ ಬೋರ್ವೆಲ್ ನಿಂದ ಜಲ ತಾನಾಗಿಯೇ ಚಿಮ್ಮುತ್ತಿದೆ. ಸಾಮಾನ್ಯವಾಗಿ ಈ ಭಾಗದಲ್ಲಿ ಜೀವಜಲಕ್ಕಾಗಿ ಜನ ಪರಿತಪಿಸುತ್ತಾರೆ. ಆದ್ರೆ ಈ ಬಾರಿ ವರುಣನ ಕೃಪೆಗೆ ಮಾದನಹಿಪ್ಪರಗಾದ ಶರಣಪ್ಪ ಹಡಲಗಿ ಅವರ ಖಂಡೇಶ್ವರ ಜನರಲ್ ಸ್ಟೋರ್ ಮುಂಭಾಗದಲ್ಲಿರುವ ಸರ್ಕಾರಿ ಬೋರ್ವೆಲ್ನಿಂದ ನೀರು ತಾನಾಗಿಯೇ ಚಿಮ್ಮುತ್ತಿದ್ದು, ಇಡೀ ಮಾದನಹಿಪ್ಪರಗಾ ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ.
ವರುಣನ ಆರ್ಭಟಕ್ಕೆ ಕಲಬುರಗಿ ಜಿಲ್ಲೆಯ ಜನ ಕಂಗಾಲಾಗಿದ್ದಾರೆ. ಮೋಡಕವಿದ ವಾತಾವರಣ ಮುಂದುವರಿದಿದ್ದು, ಮಳೆ ಬೀಳುವ ಸಾಧ್ಯತೆ ಇದೆ.