ಚಿಕ್ಕೋಡಿ: ಐನಾಪುರ ಮಾರ್ಗವಾಗಿ ಹೈದರಾಬಾದ್ ಕಡೆಗೆ ನಾಲ್ಕು ಬೃಹತ್ ಲಾರಿಗಳಲ್ಲಿ ಗೋಮಾಂಸ ಸಾಗಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೆಲವು ಸಂಘಟನೆಗಳ ಕಾರ್ಯಕರ್ತರು ವಾಹನಗಳನ್ನು ತಡೆದು ಒಂದು ವಾಹನಕ್ಕೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿರುವ ಘಟನೆ ತಡರಾತ್ರಿ ಸಂಭವಿಸಿದೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ತಡರಾತ್ರಿ ಈ ಘಟನೆ ಸಂಭವಿಸಿದೆ. ಕೆಲವು ಸಂಘಟನೆಗಳ ಕಾರ್ಯಕರ್ತರು ಜೊತೆಯಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಬೃಹತ್ ಲಾರಿಗಳನ್ನು ತಡೆದು ಅವುಗಳನ್ನು ಪರಿಶೀಲನೆ ಮಾಡಿ ಲಾರಿಯಲ್ಲಿರುವ ಚಾಲಕ ಮತ್ತು ನಿರ್ವಾಹಕನನ್ನು ತೀವ್ರ ತರಾಟೆ ತೆಗೆದುಕೊಂಡು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಕುಡಚಿ ಪಟ್ಟಣದಿಂದ ಗೋಮಾಂಸ ತುಂಬಿಕೊಂಡು 4 ಲಾರಿಗಳು ಐನಾಪುರ ಮಾರ್ಗವಾಗಿ ಹೈದರಾಬಾದ್ ಕಡೆಗೆ ತೆರಳುತ್ತಿದ್ದವು. ಈ ನಾಲ್ಕು ಲಾರಿಗಳಲ್ಲಿ ಗೋಮಾಂಸ ಸಾಗಾಟ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಆಧರಿಸಿ ಕಾರ್ಯಕರ್ತರು ಒಂದು ಲಾರಿಯನ್ನು ತಡೆದು ಪರಿಶೀಲಿಸಿದಾಗ ಗೋಮಾಂಸ ಸಾಗಾಟ ಬಯಲಾಗಿದೆ. KA 71 2045 ಸಂಖ್ಯೆಯ ಲಾರಿಯಲ್ಲಿ ಗೋಮಾಂಸ ಸಾಗಾಟ ಮಾಡಲಾಗುತ್ತಿತ್ತು. ಇದನ್ನು ತಿಳಿದು ಸ್ಥಳಕ್ಕೆ ಆಗಮಿಸಿದ ಕೆಲವು ಸಂಘಟನೆಯ ಕಾರ್ಯಕರ್ತರು ಲಾರಿಗೆ ಬೆಂಕಿ ಹಚ್ಚಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ಆಗಮಿಸಿದ ಕಾಗವಾಡ ಪೊಲೀಸರು ವಾತಾವರಣ ತಿಳಿಗೊಳಿಸಿದರು. ಅಷ್ಟರಲ್ಲಿ ಅಗ್ನಿಶಾಮಕದಳ ವಾಹನ ಬಂದು ಲಾರಿಗೆ ಹತ್ತಿದ್ದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.
ಬಾರಿ ಪ್ರಮಾಣದ ಗೋಮಾಂಸ ಕಂಡು ಗ್ರಾಮಸ್ಥರು ರೊಚ್ಚಿಗೇಳುತ್ತಿದ್ದಂತೆ, ಪೊಲಿಸರು ಗೋಮಾಂಸ ಸಮೇತ ಲಾರಿ ಹಾಗೂ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕುರಿತು ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.