ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಬಳಿ ಟೌನ್ ಶಿಪ್ಗೆ ಭೂ ಸ್ವಾಧೀನ ವಿರೋಧಿಸಿ ಕಳೆದ ನಾಲ್ಕು ದಿನಗಳಿಂದ ರೈತರು ಆಹೋರಾತ್ರಿ ಧರಣಿ ನಡೆಸುತ್ತಿರುವ ಭೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮದ ರೈತರು, ಇಂದು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಭೂ ಸ್ವಾಧೀನ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ನೀಡಲು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹಾಗೂ ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ನೇತೃತ್ವದ ಬಿಜೆಪಿ ತಂಡ ಸ್ಥಳಕ್ಕೆ ಇಂದು ಭೇಟಿ ನೀಡಿತ್ತು.
ಈ ವೇಳೆ ಮಾತನಾಡಿದ ಅಶ್ವಥ್ ನಾರಾಯಣ್, “ನಮ್ಮ ಭೂಮಿ, ನಮ್ಮ ಹಕ್ಕು. ನಾವು ನೂರಾರು ವರ್ಷಗಳಿಂದ ವ್ಯವಸಾಯ ಮಾಡುತ್ತಾ ಬಂದಿದ್ದೇವೆ. ಬಿಡದಿ ಜನ ಭೂಸ್ವಾಧೀನ ಬೇಡ ಅಂತ ಹೋರಾಟ ಮಾಡುತ್ತಿದ್ದೀರಿ. ಸರ್ಕಾರ ನಿಮ್ಮ ಹೋರಾಟಕ್ಕೆ ಬೆಲೆ ಕೊಡುತ್ತಿಲ್ಲ. ಹೇಗಾದ್ರೂ ಮಾಡಿ ನಿಮ್ಮ ಜಮೀನು ಕಬಳಿಸಿ ಬೇರೆಯವರಿಗೆ ಮಾರಲು ಸರ್ಕಾರ ಹೊರಟಿದೆ. ನೀರಾವರಿ ಜಮೀನನ್ನು ಕೃಷಿ ಹೊರತುಪಡಿಸಿ ಬೇರೆ ಕಾರ್ಯಕ್ಕೆ ಬಳಸುವಂತಿಲ್ಲ. ಜಮೀನನ್ನು ಟೌನ್ ಶಿಪ್ಗೆ ಕೊಟ್ಟರೆ ಹೊಟ್ಟೆಗೆ ಏನು ತಿನ್ನೋದು.? ಸರ್ಕಾರವೇ ಜನವಿರೋಧಿ ಆದರೆ, ಜನರು ಏನು ಮಾಡೋದು.? ಭೂ ಸ್ವಾಧೀನದ ವಿರುದ್ಧ ರೈತರು ಒಗ್ಗೂಡಬೇಕು. ನಾವೆಲ್ಲ ನಿಮ್ಮ ಜೊತೆ ಇದ್ದೇವೆ” ಎಂದರು.
ಅಶ್ವಥ್ ನಾರಾಯಣ್ ಭಾಷಣದ ವೇಳೆ, ಇಬ್ಬರು ರೈತ ಮಹಿಳೆಯರು ಹಾಗೂ ಓರ್ವ ರೈತ ಕ್ರಿಮಿನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದರು. ಈ ವೇಳೆ ಅವರ ಕೈಯಿಂದ ಕ್ರಿಮಿನಾಶಕದ ಬಾಟಲಿ ಕಿತ್ತೆಸೆಯಲಾಯಿತು. ಕೂಡಲೇ ಅವರನ್ನು ಆಸ್ಪತ್ರೆಗೆ ರವಾನಿಸಲಾಯಿತು. ಈ ವೇಳೆ ಯಾರೂ ಆತ್ಮಹತ್ಯೆ ನಿರ್ಧಾರ ಮಾಡಬೇಡಿ ಎಂದು ಅಶ್ವಥ್ ನಾರಾಯಣ್ ಮನವಿ ಮಾಡಿದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, “ನಾವು ಯಾವಾಗಲೂ ನಿಮ್ಮ ಜೊತೆ ಇರ್ತೇವೆ. ಯಾವುದೇ ಕಾರಣಕ್ಕೂ ದುಡುಕಬೇಡಿ” ಎಂದು ಮನವಿ ಮಾಡಿದರು.
ಈಗಾಗಲೇ ಬಿಡದಿಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆಗೆ ಜೆಎಂಸಿ ಸರ್ವೇ ಆರಂಭಗೊಂಡಿದ್ದು, ಇದರಿಂದ ಆಕ್ರೋಶಗೊಂಡಿರುವ ರೈತರ ನಾಲ್ಕೈದು ದಿನಗಳಿಂದಲೂ ಭೂಸ್ವಾಧೀನ ವಿರೋಧಿಸಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ಬಿಡದಿ ಬಳಿ ಟೌನ್ ಶಿಪ್ಗೆ 9 ಸಾವಿರ ಎಕರೆ ಭೂಸ್ವಾಧೀನ ಪ್ರಕ್ರಿಯೆಗೆ ಸರ್ಕಾರ ಮುಂದಾಗಿದ್ದು, ಯಾವುದೇ ಕಾರಣಕ್ಕೂ ಕೃಷಿ ಜಮೀನನ್ನು ಕೊಡಲ್ಲ ಎಂದು ರೈತರ ಪಟ್ಟು ಹಿಡಿದಿದ್ದಾರೆ. ಭೂ ಸ್ವಾಧೀನ ಪ್ರಕ್ರಿಯೆ ನಿಲ್ಲಿಸುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.