ಉಳ್ಳಾಲ(ದಕ್ಷಿಣ ಕನ್ನಡ): ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ಟ್ರೋಲರ್ ಎಂಜಿನ್ ವೈಫಲ್ಯದಿಂದ ಕೆಟ್ಟು ನಿಂತಿದ್ದು, ಪವಾಡಸದೃಶ ರೀತಿಯಲ್ಲಿ ಸಮುದ್ರದ ಅಲೆಗಳಿಂದಾಗಿ ತೇಲುತ್ತಾ ಉಳ್ಳಾಲದ ಸೀಗ್ರೌಂಡ್ ದಡಕ್ಕೆ ಬಂದು ಅಪ್ಪಳಿಸಿದೆ. ಬೋಟ್‌ನಲ್ಲಿದ್ದ 13 ಮಂದಿ ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಉಳ್ಳಾಲದ ಮುಕ್ಕಚ್ಚೇರಿ ನಿವಾಸಿ ಮೊಹಮ್ಮದ್ ಅಶ್ಫಾಕ್ ಎಂಬವರಿಗೆ ಸೇರಿದ ಬುರಾಕ್ ಟ್ರೋಲರ್ ಬೋಟ್ ಇದಾಗಿದ್ದು, ಮಂಗಳೂರಿನ ಧಕ್ಕೆಯಿಂದ ಕೇರಳ ಭಾಗಕ್ಕೆ ನಿನ್ನೆ ರಾತ್ರಿ ತೆರಳುತ್ತಿತ್ತು. ಈ ನಡುವೆ ಆಳಸಮುದ್ರದಲ್ಲಿ ಬೋಟ್ ಎಂಜಿನ್ ವೈಫಲ್ಯ ಉಂಟಾಗಿದ್ದು, ಮುಂದೆ ಸಾಗಲು ಅಸಾಧ್ಯವಾಗಿತ್ತು. ಮಧ್ಯರಾತ್ರಿ ಬೋಟ್ ಕೆಟ್ಟು ನಿಂತ ಕುರಿತು ಉಳಿದ ಮೀನುಗಾರಿಕಾ ಬೋಟಿನವರ ಗಮನಕ್ಕೆ ಬಾರದೇ 13 ಮಂದಿ ಮೀನುಗಾರರು ತಮ್ಮ ಜೀವವನ್ನು ಕೈಯಲ್ಲಿಟ್ಟುಕೊಂಡು ಬೋಟಿನೊಳಗೇ ಉಳಿದಿದ್ದರು. ಅಲೆಗಳಿಂದಾಗಿ ತೇಲುತ್ತಾ ಬಂದ ಬೋಟ್ ಇಂದು ನಸುಕಿನ ಜಾವ ಇಲ್ಲಿಯ ಸೀಗ್ರೌಂಡ್ ಸಮುದ್ರತೀರಕ್ಕೆ ಬಂದು ಅಪ್ಪಳಿಸಿದೆ. ಆದರೆ, ಘಟನೆಯಿಂದಾಗಿ ಬೋಟ್ ಮಾಲೀಕರಿಗೆ ಲಕ್ಷಾಂತರ ನಷ್ಟ ಉಂಟಾಗಿದೆ. ಉಳ್ಳಾಲ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಪ್ರತ್ಯೇಕ ಘಟನೆ: ಸೌದಿ ಅರೇಬಿಯಾದಲ್ಲಿ ಎರಡು ಬಸ್ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಉಳ್ಳಾಲದ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಉಳ್ಳಾಲದ ಮಿಲ್ಲತ್ ನಗರ ನಿವಾಸಿ ಮೊಹಮ್ಮದ್ ಅವರ ಪುತ್ರ ಅಬ್ದುಲ್ ರಾಝಿಕ್ (27) ಮೃತಪಟ್ಟಿದ್ದಾರೆ. ಸೌದಿ ಅರೇಬಿಯಾದಲ್ಲಿದ್ದ ರಾಝಿಕ್ ನಿನ್ನೆ (ಭಾನುವಾರ) ಸಂಜೆ, ರಾತ್ರಿ ಪಾಳಿಯ ಕೆಲಸಕ್ಕೆಂದು ಬಸ್ನಲ್ಲಿ ತೆರಳುತ್ತಿದ್ದಾಗ ಮತ್ತೊಂದು ಬಸ್ ಬಂದು ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಮೊಹಮ್ಮದ್ ಅವರ ಕೊನೆಯ ಪುತ್ರನಾಗಿರುವ ರಾಝಿಕ್, ಸಿವಿಲ್ ಇಂಜಿನಿಯರಿಂಗ್ ಕೋರ್ಸ್ ಮುಗಿಸಿ ವಿದೇಶಕ್ಕೆ ತೆರಳಿದ್ದರು. ಜುಬೈಲ್ನಲ್ಲಿ ಪೋಲಿಟೆಕ್ ಕಂಪೆನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ ಅವರು, ಜುಲೈ 11ರಂದು ಊರಿಗೆ ಬಂದಿದ್ದರು. ಒಂದು ತಿಂಗಳ ರಜೆ ಮುಗಿಸಿ ಆಗಸ್ಟ್ 15ರಂದು ಎರಡನೇ ಬಾರಿ ಮತ್ತೆ ವಿದೇಶಕ್ಕೆ ತೆರಳಿದ್ದರು. ರಾಝಿಕ್ ಅವರ ಸಹೋದರ ಹಾಗೂ ಸಹೋದರಿ ಅನಾರೋಗ್ಯದಿಂದ ಈ ಹಿಂದೆ ಮೃತಪಟ್ಟಿದ್ದರು. ರಾಝಿಕ್ ತಂದೆ-ತಾಯಿ, ಮೂವರು ಸಹೋದರಿಯರು, ಓರ್ವ ಸಹೋದರನನ್ನು ಅಗಲಿದ್ದಾರೆ.
ಕರಾವಳಿ ತೀರದ ಮೀನುಗಾರಿಕೆಗೆ ಕಳೆದ ಆಗಸ್ಟ್ ತಿಂಗಳಿಂದ ಹೊಸ ಉತ್ಸಾಹ ಬಂದಿದೆ. ಎರಡು ತಿಂಗಳ ರಜೆಯ ಬಳಿಕ ಮತ್ತೆ ಕಡಲ ಮಕ್ಕಳು ಮೀನುಗಾರಿಕೆಗೆ ಸಮುದ್ರಕ್ಕಿಳಿದಿದ್ದಾರೆ. ಒಂದೆಡೆ, ಈ ಋತುವಿನ ಆಳಸಮುದ್ರ ಮೀನುಗಾರಿಕೆ ಆಗಸ್ಟ್ 1ರಿಂದ ಆರಂಭಗೊಂಡಿದ್ದು, ಮೀನುಗಾರರು ಕಡಲಿಗಿಳಿದಿದ್ದಾರೆ. ಮತ್ತೊಂದೆಡೆ ಮತ್ಸ್ಯ ಸಂಪತ್ತಿನ ಕೊರತೆ ಎದುರಿಸಲು ಮೀನುಗಾರಿಕೆ ನಿಷೇಧ ಅವಧಿಯನ್ನು 60 ದಿನಗಳಿಂದ 90 ದಿನಗಳಿಗೆ ವಿಸ್ತರಿಸುವ ಚಿಂತನೆ ನಡೆದಿದೆ.