ಮೈಸೂರು: ವಿಶ್ವವಿಖ್ಯಾತ ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ 700 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊರಲಿರುವ ಅಭಿಮನ್ಯುಗೆ ಮರದ ಅಂಬಾರಿ ಹೊರಿಸಿ ಸೋಮವಾರ ಸಂಜೆ ತಾಲೀಮು ಮಾಡಿಸಲಾಯಿತು. 700 ಕೆ.ಜಿ ತೂಕ ಹೊತ್ತ ಅಭಿಮನ್ಯು ಸರಾಗವಾಗಿ ಬನ್ನಿಮಂಟಪದವರೆಗೆ ಸಾಗಿ ಚಿನ್ನದ ಅಂಬಾರಿ ಹೊರಲು ತಾನು ಫಿಟ್ ಆಗಿದ್ದೇನೆ ಎಂಬುದನ್ನು ಸಾಬೀತುಪಡಿಸಿದ.
ಇದಕ್ಕೂ ಮೊದಲು ಅಂಬಾರಿ ಕಟ್ಟುವ ಸ್ಥಳದಲ್ಲಿ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು. ನಂತರ 200 ಕೆ.ಜಿ ತೂಕದ ಮರದ ಅಂಬಾರಿ, ಅದರಲ್ಲಿ 300 ಕೆ.ಜಿ ಮರಳಿನ ಮೂಟೆ ಹಾಗೂ 200 ಕೆ.ಜಿ ತೂಕದ ನಮ್ದ ಹಾಗೂ ವಿಶೇಷ ಗಾದಿ ಸೇರಿ 700 ಕೆ.ಜಿ. ತೂಕವನ್ನು ಅಭಿಮನ್ಯು ಮೇಲೆ ಹೊರಿಸಿ ತಾಲೀಮು ನಡೆಸಲಾಯಿತು.
ಅರಮನೆಯಿಂದ ಪ್ರಾರಂಭವಾದ ತಾಲೀಮು ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ ಮಾರ್ಗವಾಗಿ ಬನ್ನಿಮಂಟಪದವರೆಗೆ ಸಾಗಿತು. ಅಭಿಮನ್ಯುಗೆ ಹೆಣ್ಣಾನೆಗಳಾದ ಹೇಮಾವತಿ ಹಾಗೂ ಕಾವೇರಿ ಸಾಥ್ ಕೊಟ್ಟವು. ಮರದ ಅಂಬಾರಿ ಹೊತ್ತ ಅಭಿಮನ್ಯು ಹಿಂದೆ ಉಳಿದ ಆನೆಗಳು ಸಾಲಾಗಿ ಸಾಗಿದವು.
ಡಿಸಿಎಫ್ ಪ್ರಭುಗೌಡ ಮಾತನಾಡಿ, ಸೋಮವಾರ ಸಂಜೆ ಅಭಿಮನ್ಯು ಆನೆಗೆ ಮೊದಲ ಬಾರಿ ಮರದ ಅಂಬಾರಿ ಹೊರಿಸಿ ತಾಲೀಮು ಮಾಡಿಸಲಾಯಿತು. 200 ಕೆ.ಜಿ ಮರದ ಅಂಬಾರಿ, 300 ಕೆ.ಜಿ ಮರಳಿನ ಮೂಟೆ ಹಾಗೂ 200 ನಮ್ದ ಗಾದಿಯನ್ನು ಹೊತ್ತ ಅಭಿಮನ್ಯು ಬನ್ನಿಮಂಟಪವನ್ನು ಯಶಸ್ವಿಯಾಗಿ ತಲುಪಿದ. ಎಲ್ಲಾ ಆನೆಗಳು ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿವೆ. ಮಾವುತರು ನೀಡುವ ಕಮಾಂಡ್ಗೆ ಸರಿಯಾಗಿ ಸ್ಪಂದಿಸುತ್ತಿವೆ. ಎಲ್ಲಾ ಆನೆಗಳು ಆರೋಗ್ಯವಾಗಿವೆ. ಇದು ಮೂರನೇ ಹಂತದ ತಾಲೀಮಾಗಿದ್ದು, ಇತರೆ ಐದು ಆನೆಗಳಿಗೆ ಮರದ ಅಂಬಾರಿ ಹೊರಿಸಿ ತಾಲೀಮು ಮಾಡಿಸಲಾಗುತ್ತದೆ ಎಂದು ತಿಳಿಸಿದರು.
ಗಜಪಡೆಗೆ ಮೊದಲ ಹಂತದ ಸಿಡಿಮದ್ದು ತಾಲೀಮು: ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಗಜಪಡೆಗೆ ಸೋಮವಾರ ಮೊದಲ ಹಂತದ ಸಿಡಿಮದ್ದು ತಾಲೀಮನ್ನು ನಗರದ ವಸ್ತು ಪ್ರದರ್ಶನ ಆವರಣದಲ್ಲಿ ನಡೆಸಲಾಯಿತು. ಇದೇ ಮೊದಲ ಬಾರಿಗೆ ಜಂಬೂಸವಾರಿಯಲ್ಲಿ ಭಾಗವಹಿಸಲು ಆಗಮಿಸಿರುವ ಶ್ರೀಕಂಠ ಆನೆ ಸ್ವಲ್ಪ ಬೆಚ್ಚಿತು. ಜೊತೆಗೆ, ಅಶ್ವದಳದ ಕುದುರೆಗಳೂ ಸಹ ಸಿಡಿಮದ್ದಿನ ಶಬ್ಧಕ್ಕೆ ಹೆದರಿದವು.