ಬಳ್ಳಾರಿ: ಕುಡಿದ ಮತ್ತಿನಲ್ಲಿ ಹಣ ನೀಡಲಿಲ್ಲ ಎನ್ನುವ ಕಾರಣಕ್ಕೆ ಅಪರಿಚಿತ ವ್ಯಕ್ತಿಯೊಬ್ಬನ ಬಳಿ ಇದ್ದ ಮೂನ್ನೂರು ರೂಪಾಯಿ ಕಸಿದುಕೊಂಡು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಬಳ್ಳಾರಿಯಲ್ಲಿ ಶುಕ್ರವಾರ (ಸೆ. 5ರಂದು) ನಡೆದಿದೆ. ಸೋಮವಾರ ಆರೋಪಿಗಳನ್ನು ಬಂಧಿಸಲಾಗಿದ್ದು, ಮೃತಪಟ್ಟ ವ್ಯಕ್ತಿ ಯಾರು ಎಂಬುದು ಇನ್ನೂ ಪತ್ತೆಯಾಗಿಲ್ಲ.
ಇನ್ನೂ ತಡರಾತ್ರಿ ನಡೆದ ಕಾರಣ ಆರಂಭದಲ್ಲಿ ಯಾರಿಗೂ ಗೊತ್ತಾಗಲಿಲ್ಲ. ಯಾರೋ ಗಿಡದ ಪೊದೆಯಲ್ಲಿ ಮಲಗಿಕೊಂಡಿದ್ಧಾರೆ ಎಂದು ನೋಡಿಲ್ಲ. ಮಧ್ಯಾಹ್ನದ ನಂತರ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಸ್ಥಳಕ್ಕೆ ಆಗಮಿಸಿದ ಎಪಿಎಂಸಿ ಪೊಲೀಸರು ನೋಡಿದಾಗ ಅಪರಿಚಿತ ವ್ಯಕ್ತಿ ಕೊಲೆಯಾಗಿ ಬಿದ್ದಿರೋದು ಗೊತ್ತಾಗಿದೆ. ರಾತ್ರಿ ವೇಳೆ ಆ ರಸ್ತೆಯಲ್ಲಿ ತಿರುಗಾಡಿದ ಅವರ ಮಾಹಿತಿ ಪಡೆದು ಮತ್ತು ಅಸುಪಾಸಿನಲ್ಲಿದ್ದ ಸಿಸಿ ಕ್ಯಾಮರಾ ಪರಿಶೀಲಿಸಿ, ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಬಳ್ಳಾರಿ ಎಸ್ಪಿ ಶೋಭಾರಾಣಿ, ಸೆಪ್ಟೆಂಬರ್ 5 ರಂದು ಮಧ್ಯಾಹ್ನದ ಹೊತ್ತಿಗೆ ಮೊಹಮ್ಮದ್ ಆಸಿಫ್ ಅವರು ತಮ್ಮ ಮನೆಯ ಹಿಂಭಾಗದಲ್ಲಿ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾಗಿರುವುದಾಗಿ ಠಾಣೆಗೆ ದೂರು ನೀಡಿದ್ದರು. ಎಪಿಎಂಸಿ ಠಾಣೆ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ, ಯಾರೋ ದುಷ್ಕರ್ಮಿಗಳು ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವುದು ಗೊತ್ತಾಗಿದೆ. ಡಿಎಸ್ಪಿ ನಂದ ರೆಡ್ಡಿ, ಎಪಿಎಂಸಿ ಇನ್ಸ್ಪೆಕ್ಟರ್ ಮೊಹಮ್ಮದ್ ರಫೀಕ್, ಇನ್ಸ್ಪೆಕ್ಟರ್ ಮಾಲ್ತೇಶ್, ಪಿಎಸ್ಐಗಳಾದ ಮಲ್ಲಿಕಾರ್ಜುನ್, ಸುರೇಶ್ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ತನಿಖೆಗಾಗಿ ತಂಡವನ್ನು ರಚಿಸಲಾಗಿತ್ತು. ತಂಡ ತನಿಖೆ ಬಳಿಕ ಆರೋಪಿಗಳಾದ ಬಾಲರಾಜ್ ಹಾಗೂ ಹನುಮಂತ ಎಂಬವರನ್ನು ಬಂಧಿಸಿದ್ದಾರೆ. ಹಾಗೂ ಅವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಮೃತ ವ್ಯಕ್ತಿ ಕುಡಿದು ರೂಪನಗುಡಿ ರಸ್ತೆಯ ಬಳಿ ಇದ್ದ ಹಳೇಯದಾದ ರೈಸ್ ಮಿಲ್ ಅಂಗಡಿ ಮುಂಭಾಗ ಮೆಟ್ಟಿಲ ಮೇಲೆ ಮಲಗಿರುತ್ತಾರೆ. ಆರೋಪಿಗಳು ಹೋಗಿ ಅವನನ್ನು ಎಬ್ಬಿಸಿ ಹಣ ಕೇಳಿರುತ್ತಾರೆ. ಆಗ ಮೃತ ವ್ಯಕ್ತಿ ಇವರ ಮೇಲೆ ಕೂಗಾಡಿರುತ್ತಾರೆ. ಆಗ ಅವರನ್ನು ಬದಿಗೆ ಕರೆದುಕೊಂಡು ಹೋಗಿ ಮತ್ತೆ ಹಣ ಕೇಳಿರುತ್ತಾರೆ. ಆಗ ಅವರು ನಿರಾಕರಿಸಿದ್ದು, ಅವರ ಬಳಿ ಇದ್ದ ಮುನ್ನೂರು ರೂಪಾಯಿ ಕಿತ್ತುಕೊಂಡು ಅವರ ಮೇಲೆ ಕಲ್ಲು ಎತ್ತಿಹಾಕಿರುತ್ತಾರೆ. ಇಬ್ಬರು ಆರೋಪಿಗಳು ವಿಪರೀತ ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾರೆ. ಆರೋಪಿಗಳ ಬಳಿ ಮೃತ ವ್ಯಕ್ತಿಯಿಂದ ಕಿತ್ತುಕೊಂಡ ಮುನ್ನೂರು ರೂಪಾಯಿ ಸಿಕ್ಕಿದೆ. ಕೃತ್ಯ ನಡೆದ ಸ್ಥಳದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಗಳ ಸಹಾಯದಿಂದ ಆರೋಪಿಗಳನ್ನು ಪತ್ತೆಹಚ್ಚಲಾಗಿದೆ ಎಂದು ಹೇಳಿದರು.