Breaking News

ದೇವಾಲಯದ ಸುತ್ತ ಮಾಂಸಾಹಾರ ನಿಷೇಧ ನೋಟಿಸ್‌ ವಾಪಸ್​: ಹೈಕೋರ್ಟ್‌ಗೆ ರಾಜ್ಯ ಸರ್ಕಾರದ ಮಾಹಿತಿ

Spread the love

ಬೆಂಗಳೂರು: ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಶಿವನಗೆರೆ ಗ್ರಾಮದಲ್ಲಿನ ಹೊನ್ನೇಶ್ವರ ದೇವಾಲಯದ ಸುತ್ತಲು ಪ್ರಾಣಿಗಳ ವಧೆ ಮತ್ತು ಮಾಂಸಾಹಾರ ಸೇವನೆ ನಿಷೇಧಿಸಿ ಹೊರಡಿಸಿರುವ ನೋಟಿಸ್‌ ಹಿಂಪಡೆಯಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಅಲ್ಲದೇ, ದೇವಾಲಯದ ಸುತ್ತಮುತ್ತಲ ಭಾಗಗಳಲ್ಲಿ ಪ್ರಾಣಿವಧೆ ಮಾತ್ರ ಸೀಮಿತಗೊಳಿಸಿ ಮುಂದಿನ ಒಂದು ವಾರದಲ್ಲಿ ಹೊಸದಾಗಿ ನೋಟಿಸ್‌ ನೀಡಲಾಗುವುದು ಎಂದು ಸರ್ಕಾರದ ಪರ ವಕೀಲರು ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.

ದೇವಾಲಯದ 200 ಮೀಟರ್‌ ವ್ಯಾಪ್ತಿಯಲ್ಲಿ ಮಾಂಸಾಹಾರ ಸೇವನೆ ಮತ್ತು ಪ್ರಾಣಿ ಬಲಿ ನಡೆಸುವಂತಿಲ್ಲ ಎಂಬ ಷರತ್ತು ವಿಧಿಸಿ ಬಡವನಹಳ್ಳಿ ಪೊಲೀಸ್ ಠಾಣೆ ವೃತ್ತ ನಿರೀಕ್ಷಕರು 2014ರ ಜುಲೈ 13ರಂದು ಸ್ಥಳೀಯ ಪೊಲೀಸರ ಹೊರಡಿಸಿದ್ದ ನೋಟಿಸ್‌ ಪ್ರಶ್ನಿಸಿ ಹೊನ್ನೇಶ್ವರ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಮಿತಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ.ಶ್ಯಾಮಪ್ರಸಾದ್‌ ಅವರಿದ್ದ ನ್ಯಾಯಪೀಠಕ್ಕೆ ಸರ್ಕಾರ ಈ ಮಾಹಿತಿ ನೀಡಿದೆ.

ಅಲ್ಲದೇ, ದೇವಾಲಯದ ಆವರಣದಲ್ಲಿ ಪ್ರಾಣಿಬಲಿಗೆ ಸಂಬಂಧಿಸಿದಂತೆ ಮಾತ್ರ ನಿರ್ಬಂಧ ವಿಧಿಸಲಾಗಿದೆ. ಆದರೆ, ಮಾಂಸಾಹಾರ ಸೇವೆನೆ ಸಂಬಂಧ ಯಾವುದೇ ನಿರ್ಬಂಧವಿಲ್ಲ ಎಂಬುದಾಗಿ ಸೂಚಿಸಿ ಹೊಸದಾಗಿ ನೋಟಿಸ್‌ ನೀಡಲಾಗುವುದು ಎಂದು ನ್ಯಾಯಪೀಠಕ್ಕೆ ವಿವರಣೆ ನೀಡಿದರು.

ನೋಟಿಸ್​​ ವಿರೋಧಿಸಿದ್ದ ಜನರು: ಈ ಹಿಂದೆ ನಡೆದಿದ್ದ ವಿಚಾರಣೆಯ ವೇಳೆ ಅರ್ಜಿದಾರರ ಪರ ವಕೀಲರು, ಹೊನ್ನೇಶ್ವರಸ್ವಾಮಿ ದೇವಾಲಯ ಮುಜರಾಯಿ ದೇವಸ್ಥಾನ ಅಲ್ಲ. ಇದೊಂದು ಖಾಸಗಿ ದೇವಾಲಯ. ಗ್ರಾಮಸ್ಥರು ಹಾಗೂ ಭಕ್ತಾದಿಗಳು ನಿರ್ವಹಣೆ ಮಾಡುತ್ತಿದ್ದಾರೆ. ದೇವಸ್ಥಾನದ ಬಳಿ ಯಾವುದೇ ಪ್ರಾಣಿಗಳ ಬಲಿ ಅಥವಾ ವಧೆ ಮಾಡುವುದಿಲ್ಲ. ಹೊರಗಿನಿಂದ ತಂದ ಮಾಂಸವನ್ನು ಅಡುಗೆ ಮಾಡಿ ದೇವಸ್ಥಾನದ ಬಳಿ ಇರುವ ಸಮುದಾಯ ಭವನ ಹಾಗೂ ಉಪಾಹಾರ ಗೃಹದಲ್ಲಿ ಸೇವನೆ ಮಾಡುತ್ತಾರೆ. ಇದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ದತಿಯಾಗಿದೆ. ಆದರೆ, ಇದೀಗ ಪೊಲೀಸರು ನೋಟಿಸ್ ಕೊಟ್ಟು ಮಾಂಸಾಹಾರ ಸೇವನೆ ನಿಷೇಧಿಸಿದ್ದಾರೆ. ಇದು ಆಹಾರದ ಹಕ್ಕು ಹಾಗೂ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಆಚರಣಾ ಪದ್ದತಿಗೆ ವಿರುದ್ಧವಾಗಿದೆ ಎಂದು ವಾದಿಸಿದ್ದರು.


Spread the love

About Laxminews 24x7

Check Also

ರಾಜ್ಯಪಾಲರ ಭಾಷಣದ ಮೊದಲ 11 ಪ್ಯಾರಾಗಳಲ್ಲಿ ವಿಬಿ ಜಿ ರಾಮ್​ ಜಿ ಕಾಯ್ದೆ ಟೀಕಿಸಿ ಕೇಂದ್ರ ಸರ್ಕಾರದ ವಿರುದ್ಧ ಕಟು ಟೀಕೆ

Spread the loveಬೆಂಗಳೂರು : ರಾಜ್ಯಪಾಲರು ಹಾಗೂ ಸರ್ಕಾರದ ಸಂಘರ್ಷದ ಮಧ್ಯೆ ರಾಜ್ಯಪಾಲರ ಭಾಷಣವನ್ನು ಸದನದಲ್ಲಿ ಮಂಡಿಸಲಾಯಿತು. ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ