ತುಮಕೂರು : ಇಂದು ನಡೆದ ಚುನಾವಣೆಯಲ್ಲಿ ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಮಾಜಿ ಸಚಿವ ಕೆ. ಎನ್. ರಾಜಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ನಾಹಿದಾ ಜಂಜಂ ಪ್ರಕಟಿಸಿದರು.
7ನೇ ಬಾರಿಗೆ ಅಧ್ಯಕ್ಷ ಸ್ಥಾನ ಅಲಂಕರಿಸುತ್ತಿರುವುದು ಕೆ. ಎನ್. ರಾಜಣ್ಣ ಅವರಿಗೆ ಹೆಗ್ಗಳಿಕೆಯೆನಿಸಿದೆ. ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಸಭಾಂಗಣದ ಒಳಗಡೆ ನೂತನ ನಿರ್ದೇಶಕ ಮಂಡಳಿಯವರು ಹೂಗುಚ್ಛ ನೀಡಿ ಹಾರ ಹಾಕಿ ಅಭಿನಂದಿಸಿದರೆ, ಬ್ಯಾಂಕ್ ಹೊರಗಡೆ ಬೃಹತ್ ಸಂಖ್ಯೆಯಲ್ಲಿ ಜಮಾಯಿಸಿದ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿಹಂಚಿ ಜೈ ಕೆಎನ್ಆರ್, ಸಹಕಾರ ಸಾರ್ವಭೌಮ ಘೋಷಣೆ ಕೂಗುತ್ತಾ ವಿಜಯೋತ್ಸವ ಆಚರಿಸಿದರು.
ಕೆ. ಎನ್. ರಾಜಣ್ಣ ಅವಿರೋಧವಾಗಿ 7ನೇ ಬಾರಿಗೆ ಆಯ್ಕೆಯಾಗಿದ್ದು, ಈಗಾಗಲೇ ನಿರ್ದೇಶಕರಾಗಿ ಆಯ್ಕೆಯಾಗಿರುವ 14 ಮಂದಿಯಲ್ಲಿ ಬಹುತೇಕ ರಾಜಣ್ಣ ಬೆಂಬಲಿತರೇ ಗೆಲುವು ಸಾಧಿಸಿದ್ದಾರೆ.
ಕೆ. ಎನ್. ರಾಜಣ್ಣ ಹೇಳಿದ್ದೇನು? ತುಮಕೂರು ಜಿಲ್ಲಾ ಕೇಂದ್ರ ಸರ್ಕಾರಿ ಬ್ಯಾಂಕ್ ಅಧ್ಯಕ್ಷರನ್ನಾಗಿ ನನ್ನನ್ನು ಅವಿರೋಧವಾಗಿ ಮುಂದಿನ ಐದು ವರ್ಷಗಳ ಅವಧಿಗೆ ನಿರ್ದೇಶಕರು ಆಯ್ಕೆ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಮಧುಗಿರಿ ಉಪವಿಭಾಗದ ಅಧಿಕಾರಿಗಳು ಚುನಾವಣಾ ಅಧಿಕಾರಿಯಾಗಿ ಕೆಲಸ ಮಾಡಿದರು ಎಂದು ಮಾಜಿ ಸಚಿವ ಕೆ. ಎನ್. ರಾಜಣ್ಣ ತಿಳಿಸಿದರು.
ಜಿಲ್ಲೆಯ ರೈತಾಪಿ ವರ್ಗದವರಿಗೆ, ಹಣಕಾಸಿನ ಸೌಲಭ್ಯ ನೀಡಿ ಸ್ವಾಭಿಮಾನಿಗಳಾಗಿ ಬದುಕು ನಡೆಸಲು ಅನುಕೂಲ ಮಾಡುವುದು ನಮ್ಮ ಆಡಳಿತ ಮಂಡಳಿ ಉದ್ದೇಶವಾಗಿದೆ. ಗ್ರಾಮೀಣ ಭಾಗದ ಜನರ ಅಭಿವೃದ್ಧಿಗೆ ಕೆಲಸ ಮಾಡುತ್ತೇವೆ. ಹೊಸ ಯೋಜನೆಗಳು, ರೈತರಿಗೆ ಉಪಕಸುಬು ಮಾಡಲು ಹೆಚ್ಚು ಒತ್ತು ನೀಡುತ್ತೇವೆ. ತೆಂಗು ಬೆಳೆಗೆ ಕಾಂಡ ಕೊರಕ ರೋಗ ನಿವಾರಣೆಗೆ ಆರ್ಥಿಕ ಸೌಲಭ್ಯ ನೀಡಲು ರೈತರಿಗೆ ಸಹಕಾರಿಯಾಗುವಂತೆ ಪ್ರಯತ್ನಿಸಲಾಗುವುದು ಎಂದು ಹೇಳಿದರು.