ಬೆಂಗಳೂರು: ಕ್ಯಾಬ್ ಚಾಲಕನೊಬ್ಬ ಹಾಡಹಗಲೇ ತನ್ನ ಮಾಜಿ ಪ್ರೇಯಸಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೈದ ಘಟನೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ಹೊಮ್ಮದೇವನಹಳ್ಳಿಯಲ್ಲಿ ಇಂದು ನಡೆಯಿತು. ಸುಮಾರು ಶೇ 80ರಷ್ಟು ದೇಹ ಸುಟ್ಟು ಹೋಗಿದ್ದರಿಂದ ಮಹಿಳೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಕೆಂಬತ್ತಳ್ಳಿಯ ನಿವಾಸಿ ವನಜಾಕ್ಷಿ (28) ಮೃತರು. ಹಂತಕ ಮೆಳೆನಲ್ಲಸಂದ್ರದ ಕ್ಯಾಬ್ ಚಾಲಕ ವಿಠ್ಠಲ್ (52) ಎಂಬಾತನನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ವನಜಾಕ್ಷಿ ಅವರನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ವನಜಾಕ್ಷಿ ಅವರ ಪತಿ ಒಂದು ವರ್ಷದ ಹಿಂದೆ ಕಾಯಿಲೆಯಿಂದ ಸಾವನ್ನಪ್ಪಿದ್ದರು. ವನಜಾಕ್ಷಿಗೆ 9 ವರ್ಷದ ಓರ್ವ ಮಗ ಇದ್ದಾನೆ. ಸಮಂದೂರು ಮರಿಯಪ್ಪ ಎಂಬವರಿಗೆ ಇವರು ಪತ್ನಿಯಾಗಲು ನಿರ್ಧರಿಸಿದ್ದರು ಎಂದು ತಿಳಿದು ಬಂದಿದೆ. ಆದರೆ, ಇದರಿಂದ ಕೋಪಗೊಂಡ ಮಾಜಿ ಪ್ರಿಯಕರ ವಿಠ್ಠಲ್, ಮಹಿಳೆಯನ್ನು ಇದೀಗ ಕೊಂದು ಹಾಕಿದ್ದಾನೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಈ ಹಿಂದೆ ರೌಡಿಶೀಟರ್ ಕೆಂಬತ್ತಳ್ಳಿ ಸಿದ್ಲಿಂಗಪ್ಪ ಅಲಿಯಾಸ್ ಸಿದ್ಲಿಂಗ ಎಂಬಾತನ ಮೇಲೆ ವನಜಾಕ್ಷಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಆರೋಪಿ ಖುಲಾಸೆಗೊಂಡಿದ್ದ. ಇದೇ ಸಿದ್ಲಿಂಗನ ಸ್ವಂತ ಅಣ್ಣನ ಮಗಳೇ ವನಜಾಕ್ಷಿ ಎಂದು ಪೊಲೀಸರು ತಿಳಿಸಿದ್ದಾರೆ.