ನೇಕಾರರ ಸಮಗ್ರ ಅಭಿವೃದ್ಧಿಗೆ ಬದ್ಧ: ಸಚಿವ ಸತೀಶ್ ಜಾರಕಿಹೊಳಿ
ಯಮಕಮರಡಿ: ನೇಕಾರರ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಸ್ಥಳೀಯವಾಗಿ ನಿಮ್ಮ ಸಮಾಜದ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಹುಕ್ಕೇರಿ ತಾಲೂಕಿನ ಆನಂದಪೂರ ಗ್ರಾಮದಲ್ಲಿ ಸತೀಶ್ ಜಾರಕಿಹೊಳಿ ನೇಕಾರ ಕಾಲೋನಿ, ಬನಶಂಕರಿ ದೇವಸ್ಥಾನ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ದೇವಾಂಗ ಬನಶಂಕರಿ ಮಂಗಲ ಕಾರ್ಯಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾನು ಜವಳಿ ಖಾತೆ ಸಚಿವನಾಗಿದ್ದ ವೇಳೆ ನೇಕಾರ ಸಮಾಜ ಬಾಂಧವರಿಗೆ ಅನುಕೂಲವಗಲಿ ಎಂಬ ದೃಷ್ಟಿಯಿಂದ ವಿದ್ಯತ್ ಬಿಲ್ ಕಡಿತಗೊಳಿಸಿದ್ದೆ. ನೇಕಾರ ಸಮಾಜ ಬಾಂಧವರ ಉದ್ದಾರಕ್ಕಾಗಿ ಈಗ ಸರ್ಕಾರದಿಂದ ಆನಂದಪುರಲ್ಲಿ ಎರಡು ಎಕರೆ ಭೂಮಿಯನ್ನು ಕಲ್ಪಿಸಲಾಗಿದೆ. ಆದ್ದರಿಂದ ನೇಕಾರ ಸಮಾಜ ಬಾಂಧವರು ನೇಕಾರಿಕೆಯಲ್ಲಿ ಹೊಸ ಹೊಸ ವಿನ್ಯಾಸ ರೂಢಿಸಿಕೊಳ್ಳುವ ಮೂಲಕ ಕೈಮಗ್ಗ, ನೇಕಾರಿಕೆ ಉಳಿಸುವುದರೊಂದಿಗೆ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದು ಇದೇ ವೇಳೆ ಸಲಹೆ ನೀಡಿದರು.
ಹಂಪಿ ಹೇಮಕೂಟ ಮಹಾ ಸಂಸ್ಥಾನ ಗಾಯತ್ರಿ ಪೀಠದ ದಯಾನಂದಪುರಿ ಮಹಾಸ್ವಾಮೀಜಿ ಮಾತನಾಡಿ, ಸತೀಶ್ ಸತೀಶ್ ಜಾರಕಿಹೊಳಿ ಅವರು ನುಡಿದಂತೆ ನಡೆಯುತ್ತಿದ್ದು, ದೇವಾಂಗ ಸಮಾಜದ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಇಂತಹ ನಾಯಕರು ಇನ್ನಷ್ಟು ಉನ್ನತ ಸ್ಥಾನಕ್ಕೇರಬೇಕೆಂದು ಹರಿಸಿದರು.
ಹತ್ತರಗಿ ಕಾರಿಮಠದ ಶ್ರೀ ಮ.ನಿ.ಪ್ರ. ಗುರುಸಿದ್ದೇಶ್ವರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಮುಖಂಡರಾದ ರವೀಂದ್ರ ಜಿಂದ್ರಾಳಿ, ರವೀಂದ್ರ ಕಲಬುರ್ಗಿ, ಪರಶುರಾಮ ಧಗೆ, ಅರುಣ ಶಂಕರ ಅತ್ತಿಮರದ, ಚಂದ್ರಕಾಂತ ಬಾಳಕೃಷ್ಣ ಕಾಪಸಿ, ಅರುಣ ಘಟಪಣದಿ, ಸಂಕಪ್ಪಾ ಮುಗಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.