ಮೈಸೂರು: ಕರಡಿ ದಾಳಿಯಿಂದ ಒಂದು ಕಣ್ಣು ಕಳೆದುಕೊಂಡ ಹೊರಗುತ್ತಿಗೆ ನೌಕರನಿಗೆ ಅರಣ್ಯಾಧಿಕಾರಿಗಳು ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿದ್ದಾರೆ. ಕಳೆದ ಜು.15 ರಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂತರಸಂತೆ ಅರಣ್ಯ ವಲಯದಲ್ಲಿ ಕರಡಿ ದಾಳಿಗೊಳಗಾಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಮನೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಹೊರಗುತ್ತಿಗೆ ನೌಕರ ಮಾದ ಅವರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ವೈಯಕ್ತಿಕವಾಗಿ ಆರ್ಥಿಕ ನೆರವು ನೀಡುವ ಮೂಲಕ ಕುಟುಂಬಸ್ಥರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ.
ಹೆಚ್.ಡಿ. ಕೋಟೆ ತಾಲೂಕಿನ ಸೋಗಹಳ್ಳಿ ಸಮೀಪದ ಎಂ.ಜಿ. ಹಳ್ಳಿ ಹಾಡಿಯ ಮಾದ ಅವರ ನಿವಾಸಕ್ಕೆ
ಭೇಟಿ ನೀಡಿದ ಅಂತರಸಂತೆ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಮಧು ಹಾಗೂ ದಮ್ಮನಕಟ್ಟೆ ವಲಯ ಅರಣ್ಯಾಧಿಕಾರಿ ಸಿದ್ದರಾಜು ಅವರು ಮಾದ ಅವರ ಆರೋಗ್ಯ ವಿಚಾರಿಸಿ, ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿ ಧೈರ್ಯ ಹೇಳಿದರು.
47 ವರ್ಷದ ಮಾದ ಅವರು ಇಲಾಖೆಯಲ್ಲಿ ಹೊರಗುತ್ತಿಗೆ ನೌಕರನಾಗಿದ್ದು, ಪತ್ನಿ ಹಾಗೂ ಮೂವರು ಮಕ್ಕಳಿದ್ದಾರೆ. ಜು.15ರಂದು ನಾಗರಹೊಳೆ ಸುಂಕದಕಟ್ಟೆ ಮಾದನ ಕಡ ಎಂಬ ಸ್ಥಳದಲ್ಲಿ ತನ್ನ ನಾಲ್ವರು ಸಹೋದ್ಯೋಗಿಗಳೊಂದಿಗೆ ಗಸ್ತು ತಿರುಗುತ್ತಿದ್ದ ವೇಳೆ ಮಾದ ಅವರ ಮೇಲೆ ಏಕಾಏಕಿ ಕರಡಿ ದಾಳಿ ನಡೆಸಿ ಮುಖದ ಭಾಗಕ್ಕೆ ಗಂಭೀರ ಗಾಯಗೊಳಿಸಿ, ಬಲಗಣ್ಣನ್ನು ತೀವ್ರವಾಗಿ ಹಾನಿಗೊಳಿಸಿತ್ತು.
ಈ ವೇಳೆ ಸಹೋದ್ಯೋಗಿಗಳು ತಕ್ಷಣ ಜೋರಾಗಿ ಕೂಗಿ ಗಾಯಾಳು ಮಾದನನ್ನು ಕರಡಿಯಿಂದ ರಕ್ಷಣೆ ಮಾಡಿ ಚಿಕಿತ್ಸೆಗೆಂದು ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದರು. ಪ್ರಸ್ತುತ ಆರೋಗ್ಯ ಸುಧಾರಿಸಿಕೊಂಡು ಮನೆಯಲ್ಲಿರುವ ಮಾದನಿಗೆ ಬಲಗಣ್ಣಿಗೆ ಹಾನಿಯಾದ ಕಾರಣ ಶಾಶ್ವತ ಅಂಧತ್ವ ಹೊಂದಿದ್ದಾರೆ.
ನಾಡಿನ ಅರಣ್ಯ ಸಂಪತ್ತಿನ ರಕ್ಷಣೆ ಜತೆಗೆ ತನ್ನ ಕುಟುಂಬಕ್ಕೆ ಆಧಾರ ಸ್ತಂಭವಾಗಿರುವ ಮಾದ ಅವರಿಗೆ ಅಧಿಕಾರಿಗಳು ಆತ್ಮಸ್ಥೈರ್ಯ ತುಂಬಿದರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಚಾಲಕ ದಿನೇಶ್, ಮಾದ ಅವರ ತಂದೆ ರಾಜು ಹಾಗೂ ಪುತ್ರ ಸಂಜಯ್ ಇದ್ದರು.