ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಹಾಗೂ ಕರಾವಳಿಯನ್ನು ಸಂಪರ್ಕಿಸುವ ಪ್ರಮುಖ ದಾರಿಯಾಗಿರುವ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ನಲ್ಲಿ ಇದೀಗ ಹೊಸ ನಿಯಮವನ್ನು ಜಿಲ್ಲಾ ಪೊಲೀಸ್ ಇಲಾಖೆ ಜಾರಿಗೆ ತಂದಿದೆ.
ಹೌದು, ರಾತ್ರಿ ವೇಳೆ ಸುಗಮವಾಗಿ ಯಾವುದೇ ರೀತಿಯ ಅಡೆತಡೆ ಇಲ್ಲದೆ ಸಂಚರಿಸುವ ವಾಹನಗಳಿಗೆ ಹೊಸ ಕಾನೂನು ನಿಯಮ ಜಾರಿಗೆ ಮಾಡಲಾಗಿದೆ. ಇನ್ನು ಮುಂದೆ ಕನಿಷ್ಠ ಐದು ವಾಹನಗಳು ಸೇರಿದಾಗ ಮಾತ್ರ ಒಟ್ಟಿಗೆ ಎಂಟ್ರಿ ಸಿಗಲಿದೆ. ರಾತ್ರಿ ವೇಳೆ ಕೊಟ್ಟಿಗೆಹಾರ ಚೆಕ್ ಪೋಸ್ಟ್ ದಾಟುವ ಎಲ್ಲಾ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಿ, ಐದು ವಾಹನಗಳು ಒಟ್ಟಾಗಿ ಹೊರಡುವಂತೆ ವ್ಯವಸ್ಥೆಯನ್ನು ರೂಪಿಸಲಾಗಿದೆ.ಯಾಕೆ ಈ ಹೊಸ ವ್ಯವಸ್ಥೆ: ದಟ್ಟ ಅರಣ್ಯದಿಂದ ಸುತ್ತುವರಿದ ಈ ಘಾಟ್ನಲ್ಲಿ ರಾತ್ರಿ ವೇಳೆ ಗೋ ಕಳ್ಳತನ ಹಾಗೂ ಅಪರಾಧ ಚಟುವಟಿಕೆಗಳು ನಡೆಯುತ್ತಿವೆ ಎಂದು ಹಲವಾರು ಬಾರಿ ಈ ಕುರಿತು ಆರೋಪಗಳ ಹಾಗೂ ದೂರುಗಳು ಕೇಳಿ ಬಂದಿದ್ದವು. ಇಂತಹ ದೂರುಗಳು ಹೆಚ್ಚಾಗಿದ್ದರ ಪರಿಣಾಮ ಇದಕ್ಕೆಲ್ಲಾ ಬ್ರೇಕ್ ಹಾಕಲು ಪೊಲೀಸರು ಈಗ ಮುಂದಾಗಿದ್ದಾರೆ.
ಕೊಟ್ಟಿಗೆಹಾರ ಚೆಕ್ ಪೋಸ್ಟ್ನಲ್ಲಿ ಈಗಿರುವ ಬ್ಯಾರಿಕೇಡ್ ಬದಲಿಗೆ ಹೊಸ ಭೂಮ್ ಬ್ಯಾರಿಯರ್ ನಿರ್ಮಿಸಲಾಗುತ್ತಿದೆ. ರಾತ್ರಿ ವೇಳೆ ಒಬ್ಬ ಪಿಎಸ್ಐ ನೇತೃತ್ವದಲ್ಲಿ ಕಾವಲು ನಿಲ್ಲಲಿದ್ದಾರೆ. ಜೊತೆಗೆ ಚೆಕ್ ಪೋಸ್ಟ್ ನಿಂದ ಒಂದೂವರೆ ಕಿಲೋ ಮೀಟರ್ ದೂರದಲ್ಲಿರುವ ಕಚ್ಚಾ ರಸ್ತೆಯನ್ನು ಗೋ ಕಳ್ಳರು ದುರುಪಯೋಗ ಮಾಡುವರೆಂಬ ದೂರಿನ ಹಿನ್ನೆಲೆ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿ ಆ ರಸ್ತೆಯಲ್ಲಿ ಗೇಟ್ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ಮಾಹಿತಿ ನೀಡಿದರು.
ಈ ಗೇಟ್ ರಾತ್ರಿ 10 ರಿಂದ ಬೆಳಗ್ಗೆ 6ರ ವರೆಗೆ ಮುಚ್ಚಿರಲಿದೆ. ಇನ್ನು ಮುಂದೆ ಕೊಟ್ಟಿಗೆಹಾರ ಚೆಕ್ ಪೋಸ್ಟ್ ಮೂಲಕ ಹೋಗುವ ಎಲ್ಲಾ ವಾಹನಗಳ ವಿವರಗಳು ಸಿಸಿಟಿವಿಯಲ್ಲಿ ದಾಖಲಾಗಿವೆ. ಪೊಲೀಸರು ತಮ್ಮ ದಾಖಲೆ ಪುಸ್ತಕಗಳಲ್ಲೂ ಬರೆಯಲಿದ್ದಾರೆ ಎಂದು ಎಸ್ಪಿ ಅಮಟೆ ತಿಳಿಸಿದರು.
ಸಾಮಾನ್ಯವಾಗಿ, ಚಾರ್ಮಾಡಿ ಘಾಟ್ನಲ್ಲಿ ಗೋ ಕಳ್ಳತನ ಮತ್ತು ಇತರ ಅಪರಾಧಗಳಿಗೆ ಕಡಿವಾಣ ಹಾಕಲು ಎಸ್ಪಿ ವಿಕ್ರಂ ಅಮಟೆ ರೂಪಿಸಿರುವ ಈ ಮಾಸ್ಟರ್ ಯೋಜನೆ ಸಾರ್ವಜನಿಕರಿಂದ ಮೆಚ್ಚುಗೆಯನ್ನು ಪಡೆದಿದ್ದು, ಈ ಯೋಜನೆಯನ್ನು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಮಾಡಲಾಗುವುದು ಎಂದು ಎಸ್ ಪಿ ತಿಳಿಸಿದರು.