ಹುಬ್ಬಳ್ಳಿ, ಆಗಸ್ಟ್ 26: ರಾಜ್ಯ ಸರ್ಕಾರ ಪಿಓಪಿ ಗಣೇಶ (POP Ganesha) ಮೂರ್ತಿಗಳನ್ನು ನಿಷೇಧಿಸಿದ್ದು, ಪರಿಸರ ಸ್ನೇಹಿ ಗಣೇಶ ಮೂರ್ತಿ (Eco Friendly Ganesha) ಪ್ರತಿಷ್ಟಾಪನೆ ಮಾಡಿ, ಪರಿಸರ ಉಳಿಸಿ ಅಂತ ಮನವಿ ಮಾಡಿದೆ. ಸರ್ಕಾರದ ಈ ಆಶಯವನ್ನು ಸಾಕಾರಗೊಳಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (HDMC) ಇದೀಗ ವಿನೂತನ ಕಾರ್ಯ ಆರಂಭಿಸಿದೆ. ಅದಕ್ಕಾಗಿ ಇಕೋ ಭಕ್ತಿ ಸಂಭ್ರಮ ಅಭಿಯಾನ ಆರಂಭಿಸಿದ್ದು, ವಿಜೇತರಿಗೆ ಬಹುಮಾನ ನೀಡಲು ಮುಂದಾಗಿದೆ.
ಪರಿಸರ ಸ್ನೇಹಿ ಗಣೇಶೋತ್ಸವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಹು-ಧಾ ಮಹಾನಗರ ಪಾಲಿಕೆ ಆಯೋಜಿಸಿರುವ “ಇಕೋ ಭಕ್ತಿ ಸಂಭ್ರಮ’ದ ಅಧಿಕೃತ ವೆಬ್‍ಸೈಟ್ (www.ecobhaktihdmc.com) ಆಗಸ್ಟ್ 25ರಿಂದ ಆರಂಭವಾಗಿದೆ ಎಂದು ಹು-ಧಾ ಮಹಾನಗರ ಪಾಲಿಕೆ ಆಯುಕ್ತರಾದ ಡಾ. ರುದ್ರೇಶ ಘಾಳಿ ತಿಳಿಸಿದ್ದಾರೆ.
ಗಣೇಶ ಚತುರ್ಥಿಯನ್ನು ಸಂಪೂರ್ಣ ಪರಿಸರ ಸ್ನೇಹಿಯಾಗಿಸುವ ಪ್ರಯತ್ನದಿಂದ ಆರಂಭಿಸಿರುವ ಈ ಅಭಿಯಾನದಲ್ಲಿ ಜನರು ಸಕ್ರಿಯಾಗಿ ಪಾಲ್ಗೊಳ್ಳಲಿ ಎಂಬ ನಿಟ್ಟಿನಲ್ಲಿ ಡಿಜಿಟಲ್ ಪ್ರಮಾಣಪತ್ರ ಹಾಗೂ ಬಹುಮಾನಗಳನ್ನು ನೀಡಿ ಉತ್ತೇಜಿಸಲಾಗುತ್ತಿದೆ.
ಗಣೇಶೋತ್ಸವದಲ್ಲಿ ಪಿಒಪಿ ಬದಲು ಮಣ್ಣಿನ ಮೂರ್ತಿ ಪ್ರತಿಷ್ಠಾಪಿಸುವ ಒಂದು ಲಕ್ಷ ಜನರಿಗೆ ಡಿಜಿಟಲ್ ಪ್ರಮಾಣಪತ್ರ ನೀಡಲಾಗುತ್ತದೆ. ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್‍ನಿಂದ ಗಣಪತಿ ಮಂಟಪ ಅಲಂಕಾರ ಮಾಡುವ ಹಾಗೂ ಮನೆ ಆವರಣದಲ್ಲೇ ಪರಿಸರ ಸ್ನೇಹಿ ಗಣೇಶ ವಿಸರ್ಜನೆ ಮಾಡುವವರಿಗೆ ಬಹುಮಾನ ನೀಡಲಾಗುವುದು.