ಉಡುಪಿ: ಗಣೇಶೋತ್ಸವಕ್ಕೆ ಇನ್ನು ಒಂದೇ ದಿನ ಬಾಕಿ. ವಿನಾಯಕನ ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡುವ ಕೆಲಸ ಎಲ್ಲೆಡೆ ಭರದಿಂದ ಸಾಗುತ್ತಿದೆ. ಈ ಮಧ್ಯೆ ನಗರದ ಅಲೆವೂರಿನ ನಿವೃತ್ತ ಶಿಕ್ಷಕರೊಬ್ಬರು ಸದ್ದಿಲ್ಲದೆ ಕಳೆದ ನಾಲ್ಕೂವರೆ ದಶಕದಿಂದ ಮೂರ್ತಿ ತಯಾರಿಸಿ ಮಾರಾಟ ಮಾಡುವುದರ ಜೊತೆಗೆ ಪರಿಸರ ಸಂರಕ್ಷಣೆಯ ಸಲಹೆಗಳನ್ನು ನೀಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಅಲೆವೂರಿನ 70 ವರ್ಷದ ಶೇಖರ ಕಲ್ಮಾಡಿ ಅವರು, ಪ್ರತಿವರ್ಷವೂ ಪರಿಸರಸ್ನೇಹಿ ಮಣ್ಣಿನ ಗಣಪನ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಜೊತೆಗೆ ತಮಗೆ ಸಿದ್ಧಿಸಿರುವ ಈ ಕಲೆಯನ್ನು ಉಳಿದವರಿಗೆ ಕಲಿಸುವ ಕೆಲಸವನ್ನೂ ಮಾಡುತ್ತಾರೆ. ಶೇಖರ ಅವರು ಅಲೆವೂರಿನ ನೆಹರೂ ಪ್ರೌಢಶಾಲೆಯಲ್ಲಿ ಕಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸಿ, ಮುಖ್ಯೋಪಾಧ್ಯಾಯರಾಗಿ ನಿವೃತ್ತಿ ಹೊಂದಿದ್ದಾರೆ.
ಆವೆ ಮಣ್ಣಿನಿಂದ ಮೂರ್ತಿ ತಯಾರಿಸುವುದರ ಜೊತೆಗೆ ಪರಿಸರಕ್ಕೆ ಹಾನಿಕಾರಕವಲ್ಲದ ಬಣ್ಣವನ್ನೂ ಮಿತವಾಗಿ ಬಳಸಿ ಮೂರ್ತಿಯನ್ನು ತಯಾರಿಸುತ್ತಾರೆ. ಶೇಖರ ಕಲ್ಮಾಡಿ ಅವರು ನಿರ್ಮಿಸುವ ಮೂರ್ತಿಗಳಿಗೆ ಪ್ರತಿವರ್ಷವೂ ಎಲ್ಲಿಲ್ಲದ ಬೇಡಿಕೆ ಇರುತ್ತದೆ. ಸಂಘ ಸಂಸ್ಥೆಗಳು, ಮನೆಯಲ್ಲಿ ವಿಗ್ರಹ ಇರಿಸಿ ಪೂಜಿಸುವವರು ಇವರ ಬಳಿಯಿಂದ ಮೂರ್ತಿಗಳನ್ನು ಖರೀದಿಸಿ ಕೊಂಡೊಯ್ಯುತ್ತಾರೆ. ಉಡುಪಿಯ ಮಣಿಪುರ, ಶಾಂತಿನಗರ, ಪ್ರಗತಿನಗರ, ಮಟ್ಟು, ಪಡುಕೆರೆ ಮೊದಲಾದೆಡೆಯ ಗಣೇಶೋತ್ಸವ ಸಮಿತಿಗಳು ಪ್ರತಿವರ್ಷವೂ ಇವರು ತಯಾರಿಸುವ ಮೂರ್ತಿಗಳನ್ನೇ ಪೂಜಿಸಲು ಕೊಂಡೊಯ್ಯುತ್ತಿವೆ.
ಒಂದೂವರೆ ಅಡಿ ಎತ್ತರದ ಗಣಪತಿ ವಿಗ್ರಹದಿಂದ ಐದು ಅಡಿ ಎತ್ತರದವರೆಗಿನ ಗಣಪತಿಯ ಬಗೆಬಗೆಯ ಮೂರ್ತಿಗಳು ಶೇಖರ ಅವರ ಕೈಯಲ್ಲಿ ಅರಳಿವೆ. ಅಲ್ಲದೆ ಅಲೆವೂರಿನ ಸಾರ್ವಜನಿಕ ಗಣೇಶೋತ್ಸವಕ್ಕೆ ಅವರು ಪ್ರತಿವರ್ಷ ಉಚಿತವಾಗಿ ಗಣೇಶನ ವಿಗ್ರಹವನ್ನು ನೀಡುತ್ತಾರೆ.