ಬೆಳಗಾವಿ: ಘಟಪ್ರಭಾ ಹಾಗೂ ಮಾರ್ಕಂಡೇಯ ನದಿಗಳಿಂದ ಮುಳುಗಡೆ ಆಗುವ ನಾಲ್ಕು ಸೇತುವೆಗಳನ್ನು ಹೊಸದಾಗಿ ನಿರ್ಮಿಸುವ ಯೋಜನೆ ಇದೆ. ಇದಕ್ಕೆ ಪ್ರಕೃತಿ ವಿಕೋಪ ಪರಿಹಾರ ನಿಧಿ ಅಡಿಯಲ್ಲಿ 11 ಕೋಟಿ ಅನುದಾನ ಲಭ್ಯ ಇದೆ. ಇದರ ಜೊತೆಗೆ ಲೋಕೋಪಯೋಗಿ ಇಲಾಖೆಯಿಂದ ಮತ್ತಷ್ಟು ಅನುದಾನ ಪಡೆದು, ಬೇಸಿಗೆಯಲ್ಲಿ ಸೇತುವೆ ನಿರ್ಮಾಣ ಕೆಲಸ ಕೈಗೆತ್ತಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ಘಟಪ್ರಭಾ ನದಿ ಪ್ರವಾಹದಿಂದ ಗೋಕಾಕ್ ನಗರದ ಬಳಿ ಇರುವ ಲೋಳಸೂರ ಸೇತುವೆ ಮುಳುಗಡೆ ಆಗಿರುವ ಹಿನ್ನೆಲೆಯಲ್ಲಿ ಇಂದು ಪರಿಶೀಲನೆ ನಡೆಸಿದ ಬಳಿಕ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿದರು.ಲೋಳಸೂರ ಹಾಗೂ ಶಿಂಗಳಾಪುರ ಸೇತುವೆ ಪ್ರತಿವರ್ಷ ಮುಳುಗುತ್ತಿದೆ. ಇದರೊಂದಿಗೆ ಮಾರ್ಕಂಡೇಯ ನದಿಯಿಂದಾಗಿ ಚಿಕ್ಕೋಳಿ ಸೇತುವೆ ಕೂಡ ಮುಳುಗುತ್ತವೆ. ರೈತರು ಹಾಗೂ ಜನರಿಗೆ ಸಾಕಷ್ಟು ನಷ್ಟವಾಗುತ್ತಿರುವುದು ಗಮನಕ್ಕೆ ಬಂದಿದೆ. ಇದರ ಗಂಭೀರತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಗಮನಕ್ಕೆ ತಂದು ಶಾಶ್ವತ ಪರಿಹಾರವನ್ನು ಇದೇ ವರ್ಷ ಕಂಡುಕೊಳ್ಳಲಾಗುವುದು ಎಂದು ಹೇಳಿದರು.