ಬೆಂಗಳೂರು: ಹೃದಯಾಘಾತದಿಂದ ಮರಣವಾಗುವವರ ಸಂಖ್ಯೆ ಅಧಿಕವಾಗುತ್ತಿದ್ದು, ಇದನ್ನ ನಿಯಂತ್ರಿಸಲು ಈ ವರ್ಷದಿಂದಲೇ ಡಾ.ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆಯನ್ನ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲಾಣ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಹೃದಯಾಘಾತ ತಡೆಯಲು 2023ರಲ್ಲಿ ಹೃದಯ ಜ್ಯೋತಿ ಯೋಜನೆ ಆರಂಭಿಸಲಾಗಿದೆ. ಪ್ರಸ್ತಕ ಆರ್ಥಿಕ ಸಾಲಿನಲ್ಲಿ ರಾಜ್ಯದ 86 ಕೇಂದ್ರಗಳಲ್ಲಿ ಈ ಯೋಜನೆ ಚಾಲ್ತಿಯಲ್ಲಿದೆ. ಈ ಯೋಜನಯನ್ನ ರಾಜ್ಯದ ಜಿಲ್ಲಾ, ತಾಲೂಕು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಟೆಲಿ ಇಸಿಜಿ ಕೇಂದ್ರಗಳನ್ನ ತೆರೆದು ನಿಯಮಿತವಾಗಿ ಹೃದಯ ತಪಾಸಣೆ ಕಾರ್ಯ ಮಾಡಲಾಗುವುದು ಪರಿಷತ್ ಸದಸ್ಯ ಡಾ.ಧನಂಜಯ್ ಸರ್ಜಿ ಪ್ರಶ್ನೆಗೆ ಸಚಿವರು ತಿಳಿಸಿದರು.
ಹೃದಯದ ರಕ್ತನಾಳದಲ್ಲಿ ಬ್ಲಾಕ್ ಆಗಿ ಉಸಿರಾಟ ತೊಂದರೆಯಿಂದಾಗಿ ಆಸ್ಪತ್ರೆಗೆ ಬರುವ ಮುನ್ನವೇ ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಟೆಲಿ ಇಸಿಜಿ ಸೆಂಟರ್ಗಳಲ್ಲಿ ತಪಾಸಣೆ ನಡೆಸಿ ರಕ್ತನಾಳದಲ್ಲಿ ಬ್ಲಾಕ್ ತೆರವುಗೊಳಿಸಲು 25 ಸಾವಿರ ರೂಪಾಯಿ ವೆಚ್ಚದ ಚುಚ್ಚುಮದ್ದನ್ನ ಉಚಿತವಾಗಿ ನೀಡಲಾಗುತ್ತಿದೆ. ಇದಾದ ಬಳಿಕ ರೋಗಿಗಳು ಕಾರ್ಡಿಯಾ ಬೈಪಾಸ್ ಮಾಡಿಸಿಕೊಳ್ಳಬಹುದಾಗಿದೆ. ಹೃದಯ ಸಂಬಂಧಿತ ಸಮಸ್ಯೆಗಳ ಬಗ್ಗೆ ಇದನ್ನ ನಿಯಂತ್ರಿಸಲು ಪಠ್ಯಪುಸ್ತಕಗಳಲ್ಲಿ ಅಳವಡಿಸುವಂತೆ ಶಿಕ್ಷಣ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದರು.
ಬದಲಾದ ಜೀವನಶೈಲಿ, ವ್ಯಾಯಾಮ ಮಾಡದಿರುವುದು, ಮದ್ಯಪಾನ, ಆಹಾರ ಪದ್ಧತಿ, ಬೊಜ್ಜುತನ, ಮಧುಮೇಹ ಹಾಗೂ ರಕ್ತದೊತ್ತಡ ಸೇರಿದಂತೆ ಸ್ವಯಂಕೃತ ಅಪರಾಧಗಳಿಂದ ಜನರಲ್ಲಿ ಹೃದಯಾಘಾತ ಕಾಣಿಸಿಕೊಂಡು ಸಾವನ್ನಪ್ಪಿದ್ದಾರೆ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕ ಕೆ.ಎಸ್.ರವೀಂದ್ರನಾಥ್ ವರದಿಯಲ್ಲಿ ತಿಳಿಸಿದ್ದಾರೆ.