Breaking News

ಅಗ್ನಿ ಅವಘಡದಲ್ಲಿ ಐವರ ಸಾವು ಪ್ರಕರಣ: ಕಟ್ಟಡದ ಇಬ್ಬರು ಮಾಲೀಕರು ಪೊಲೀಸ್ ವಶಕ್ಕೆ

Spread the love

ಬೆಂಗಳೂರು: ಅಗ್ನಿ ಅವಘಡದಲ್ಲಿ ಐವರು ಸಜೀವ ದಹನವಾದ ಘಟನೆಗೆ ಸಂಬಂಧಿಸಿದಂತೆ ಕಟ್ಟಡದ ಮಾಲೀಕರಿಬ್ಬರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಇಂದು ವಶಕ್ಕೆ ಪಡೆದಿದ್ದಾರೆ. ದುರಂತ ಸಂಭವಿಸಿದ ಕಟ್ಟಡದ ಮಾಲೀಕರಾದ ಬಾಲಕೃಷ್ಣಯ್ಯ ಶೆಟ್ಟಿ ಹಾಗೂ ಸಂದೀಪ್ ಶೆಟ್ಟಿ ಅವರನ್ನು ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ (ಆಗಸ್ಟ್ 16) ನಸುಕಿಜಾವ 3 ಗಂಟೆ ಸುಮಾರಿಗೆ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ನಗರತ್ ಪೇಟೆಯಲ್ಲಿ ಸಂಭವಿಸಿದ ಈ ಅಗ್ನಿ ಅವಘಡದಲ್ಲಿ ರಾಜಸ್ಥಾನ ಮೂಲದ ಮದನ್ ಕುಮಾರ್ (36), ಆತನ ಪತ್ನಿ ಸಂಗೀತಾ (33), ಮಕ್ಕಳಾದ ಮಿಥೇಶ್ (8), ವಿಹಾನ್‌ (5) ಹಾಗೂ ಪಕ್ಕದ ಮನೆಯಲ್ಲಿದ್ದ ಸುರೇಶ್ (30) ಎಂಬುವರು ಸಜೀವ ದಹನವಾಗಿದ್ದರು. ಕಟ್ಟಡದ ನೆಲಮಹಡಿಯಲ್ಲಿದ್ದ ಪ್ಲಾಸ್ಟಿಕ್ ಮ್ಯಾಟ್ ಗೋದಾಮಿನಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆ ಬಹುಬೇಗನೆ ವ್ಯಾಪಿಸಿದ್ದರಿಂದ ಐವರೂ ಸಹ ಸಾವನ್ನಪ್ಪಿದ್ದರು.

ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ, ಕಿಟಕಿ, ಬೆಳಕಿನ ವ್ಯವಸ್ಥೆ ಸೂಕ್ತವಾಗಿರದೆ ಅವೈಜ್ಞಾನಿಕವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಇದರಿಂದಾಗಿಯೇ ಅಗ್ನಿ ಅವಘಡ ಸಂಭವಿಸಿದಾಗ ಐವರ ಸಾವು ಸಂಭವಿಸಿದೆ ಎಂದು ಆರೋಪಿಸಿ ಗೋಪಾಲ್ ಸಿಂಗ್ ಎಂಬುವರು ಹಲಸೂರು ಗೇಟ್ ಠಾಣೆಗೆ ದೂರು ನೀಡಿದ್ದರು. ಅದರನ್ವಯ ಭಾರತೀಯ ನ್ಯಾಯ ಸಂಹಿತೆಯ ಕಾಯ್ದೆ 105 3(5), 324(5)ರಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಘಟನೆ ಸಂಭವಿಸಿದ್ದು ಹೇಗೆ? ನಾಲ್ಕು ಅಂತಸ್ತಿನ ಕಟ್ಟಡದ ನೆಲಮಹಡಿ ಹಾಗೂ ಮೊದಲ ಮಹಡಿಯಲ್ಲಿ ಪ್ಲಾಸ್ಟಿಕ್ ಮ್ಯಾಟ್‌ಗಳನ್ನು ಸಂಗ್ರಹಿಸಿಟ್ಟಿದ್ದ ಗೋದಾಮು ಇತ್ತು. ಮೂರನೇ ಮಹಡಿಯಲ್ಲಿದ್ದ ಮನೆಯಲ್ಲಿ ಮದನ್ ಕುಮಾರ್ ಕುಟುಂಬ ವಾಸವಿತ್ತು. ನಾಲ್ಕನೇ ಮಹಡಿಯಲ್ಲಿ ಒಂದು ರೂಮ್ ಇತ್ತು. ಅಗ್ನಿ ಅವಘಡದಿಂದಾಗಿ ಮದನ್ ಕುಮಾರ್ ಕುಟುಂಬ ಹಾಗೂ ಮೊದಲ ಮಹಡಿಯಲ್ಲಿನ ಗೋದಾಮಿನೊಳಗೆ ಮೂವರು ಕಾರ್ಮಿಕರು ಸಿಲುಕಿಕೊಂಡಿದ್ದರು. ಸದ್ಯ ಮದನ್ ಕುಮಾರ್ ಸೇರಿದಂತೆ ಐವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಶನಿವಾರ ಮಾಹಿತಿ ನೀಡಿದ್ದರು.


Spread the love

About Laxminews 24x7

Check Also

ಬ್ಯಾಂಕ್ ಮ್ಯಾನೇಜರ್ ಸಮಯಪ್ರಜ್ಞೆ: ಡಿಜಿಟಲ್ ಅರೆಸ್ಟ್​​ನಿಂದ 84 ಲಕ್ಷ ರೂ. ವಂಚನೆಗೆ ಬ್ರೇಕ್

Spread the loveಮಂಗಳೂರು: ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಅರೆಸ್ಟ್ ಎಂದು ಖದೀಮರು ಅಮಾಯಕರನ್ನು ವಂಚಿಸಿ ಕೋಟಿಗಟ್ಟಲೆ ಹಣ ವಂಚಿಸುತ್ತಿರುವುದು ಬೆಳಕಿಗೆ ಬರುತ್ತಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ