ಬೆಂಗಳೂರು ಹೊರವಲಯದ ಅಭಿಮಾನ್ ಸ್ಟುಡಿಯೋದಲ್ಲಿ ನಿರ್ಮಿಸಲಾಗಿದ್ದ ಸ್ಯಾಂಡಲ್ವುಡ್ನ ಸಾಹಸಿಂಹ ಖ್ಯಾತಿಯ ವಿಷ್ಣುವರ್ಧನ್ ಸ್ಮಾರಕವನ್ನು ತೆರವು ಮಾಡಿರುವ ಕ್ರಮಕ್ಕೆ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಕನ್ನಡದ ಖ್ಯಾತ ನಟ ಧ್ರುವ ಸರ್ಜಾ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಅಭಿಮಾನಿಗಳು ಕಳೆದ ದಿನದಿಂದ ಅಭಿಮಾನ್ ಸ್ಟುಡಿಯೋ ಬಳಿ ಸೇರಿ ಪ್ರತಿಭಟನೆ ನಡೆಸಿದ್ದಾರೆ. ತಮ್ಮ ಮೆಚ್ಚಿನ ತಾರೆ ನೆನೆದು ಕಣ್ಣೀರಿಟ್ಟಿದ್ದಾರೆ. ಈ ನಡುವೆ ನಟ ಧ್ರುವ ಸರ್ಜಾ ಅವರು ಈ ಶ್ರೇಷ್ಠ ಸಾಧಕನಿಗೆ ಈ ಅಪಮಾನ ಸರಿಯಲ್ಲ. ಮನಸ್ಸಿಗೆ ಬಹಳ ನೋವಾಗಿದೆ ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಧ್ರುವ ಸರ್ಜಾ ಪೋಸ್ಟ್: ”ಸಾಧಕನಿಗೂ ಸಾವಿಲ್ಲ, ಕಲೆಗೂ ಸಾವಿಲ್ಲ, ವಿಷ್ಣು ಅಪ್ಪಾಜಿ ಅಜರಾಮರ. ಕೋಟ್ಯಂತರ ಕನ್ನಡಿಗರ ಹೃದಯದಲ್ಲಿ ಗುಡಿ ಕಟ್ಟಿರುವ ವ್ಯಕ್ತಿಗೆ ಸ್ಮಾರಕ ಏಕೆ ಬೇಕು? ಆದರೂ ಸಹ ಈ ಒಂದು ನಾಡಿನಲ್ಲಿ ಇಂಥ ಒಬ್ಬ ಸಾಧಕನಿಗೆ ಈ ಅಪಮಾನ ಸರಿಯಲ್ಲ. ಮನಸ್ಸಿಗೆ ಬಹಳಷ್ಟು ನೋವು ಉಂಟಾಗಿದೆ. ಕೇಳಲು ಸಾಕಷ್ಟು ಪ್ರಶ್ನೆಗಳಿವೆ. ಆದರೆ ಇದೆಲ್ಲದಕ್ಕೂ ಉತ್ತರ – ನಾನು ಒಬ್ಬ ಕನ್ನಡಿಗನಾಗಿ, ಒಬ್ಬ ಕಲಾವಿದನಾಗಿ ಈ ಒಂದು ಸಂದರ್ಭದಲ್ಲಿ ನಾನು ವಿಷ್ಣು ಸರ್ ಅಭಿಮಾನಿಗಳ ಜೊತೆ ಪ್ರಾಮಾಣಿಕವಾಗಿ ಇದ್ದೇನೆ. ನಿಮ್ಮ ಮುಂದಿನ ನಡೆಗಾಗಿ ಕಾಯುತ್ತಿದ್ದೇನೆ. ಜೈ ಕನ್ನಡಾಂಬೆ. ವಿಷ್ಣು ದಾದಾ ಅಜರಾಮರ (ಕೈಮುಗಿಯುವ ಎಮೋಜಿಯೊಂದಿಗೆ)” ಎಂದು ಧ್ರುವ ಸರ್ಜಾ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
ಅಭಿಮಾನ್ ಸ್ಟುಡಿಯೋದಲ್ಲಿ 2009ರಲ್ಲಿ ನಟ ವಿಷ್ಣುವರ್ಧನ್ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರವನ್ನು ಅಪಾರ ಸಂಖ್ಯೆಯ ಅಭಿಮಾನಿಗಳ ಸಮ್ಮುಖದಲ್ಲಿ ನಡೆಸಲಾಗಿತ್ತು. ಅದೇ ಜಾಗದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಿಸಲಾಗಿತ್ತು. ಇದೀಗ ಅದನ್ನು ತೆರವುಗೊಳಿಸಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.