ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾಗೆ ಕಾಡಿನಿಂದ ನಾಡಿಗೆ ಗಜಪಡೆಯನ್ನು ಸ್ವಾಗತಿಸುವ ಗಜಪಯಣ ಕಾರ್ಯಕ್ರಮಕ್ಕೆ ಇಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹೆಬ್ಬಾಗಿಲು ವೀರನಹೊಸಳ್ಳಿಯ ಬಳಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ದೊರೆಯಲಿದೆ.
ವೀರನಹೊಸಳ್ಳಿ ಗ್ರಾಮದ ಬಳಿ ಮಧ್ಯಾಹ್ನ 12.34ರಿಂದ 12.59ರ ತುಲಾ ಲಗ್ನದಲ್ಲಿ ಗಜಪಡೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಗಜಪಯಣ ಆರಂಭವಾಗಲಿದೆ.
ದಸರಾ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಒಟ್ಟು 14 ಆನೆಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ, 9 ಆನೆಗಳ ಮೊದಲ ತಂಡ ಅಭಿಮನ್ಯು ನೇತೃತ್ವದಲ್ಲಿ ಮೈಸೂರು ನಗರಕ್ಕೆ ಆಗಮಿಸಲಿದೆ. ಗಜಪಡೆಯನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸುವ ಕಾರ್ಯಕ್ರಮ ಇದಾಗಿದೆ.
ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಸ್ಥಳೀಯ ಶಾಸಕ ಜಿ.ಡಿ.ಹರೀಶ್ ಗೌಡ ಸೇರಿದಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.
14 ಆನೆಗಳ ಆಗಮನ: ಈ ಬಾರಿ ದಸರಾ ಮಹೋತ್ಸವದಲ್ಲಿ 4 ಹೆಣ್ಣಾನೆಗಳು ಸೇರಿದಂತೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 14 ಆನೆಗಳು ಪಾಲ್ಗೊಳ್ಳಲಿವೆ. ಅಭಿಮನ್ಯು, ಭೀಮ, ಕಂಜನ್, ಧನಂಜಯ, ಪ್ರಶಾಂತ, ಮಹೇಂದ್ರ, ಏಕಲವ್ಯ ಮತ್ತು ಹೆಣ್ಣಾನೆಗಳಾದ ಕಾವೇರಿ ಹಾಗೂ ಲಕ್ಷ್ಮೀ ಸೇರಿ 9 ಆನೆಗಳು ಮೊದಲ ಹಂತದಲ್ಲಿ ಮೈಸೂರಿಗೆ ಆಗಮಿಸಲಿವೆ.
ಬಳಿಕ 5 ಆನೆಗಳು ಎರಡನೇ ಹಂತದಲ್ಲಿ ಬರಲಿದ್ದು, ಅವುಗಳ ಆಯ್ಕೆ ಇನ್ನೂ ಆಗಿಲ್ಲ. ಅಲ್ಲದೆ, ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಆನೆಗಳ ಜೊತೆ ಮಾವುತರು, ಕಾವಾಡಿಗಳು, ವಿಶೇಷ ಮಾವುತರು ಹಾಗೂ ಕುಟುಂಬದ ಇತರ ಸದಸ್ಯರು ಸೇರಿ 40 ಕುಟುಂಬಗಳಿಂದ 120 ಜನರು ಆಗಮಿಸುವ ಸಾಧ್ಯತೆ ಇದೆ.
11 ದಿನಗಳ ದಸರಾ ಕಾರ್ಯಕ್ರಮ: ಸೆಪ್ಟೆಂಬರ್ 22ರ ಬೆಳಗ್ಗೆ 10.10ರಿಂದ 10.40ರ ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡಿ ಬೆಟ್ಟದ ವೇದಿಕೆ ಕಾರ್ಯಕ್ರಮದಲ್ಲಿ ನಾಡ ಅಧಿದೇವತೆಗೆ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ದಸರಾಗೆ ಚಾಲನೆ ಸಿಗಲಿದೆ. ಈ ಸಲ 11 ದಿನಗಳ ಕಾಲ ದಸರಾ ಕಾರ್ಯಕ್ರಮಗಳು ನಡೆಯುವುದು ವಿಶೇಷ. ಕೊನೆಯ ದಿನ ಅಕ್ಟೋಬರ್ 2ರ ಮಧ್ಯಾಹ್ನ 1 ಗಂಟೆಯಿಂದ 1.18ರ ಧನುರ್ ಲಗ್ನದಲ್ಲಿ ಅರಮನೆ ಮುಂಭಾಗದ ಕೋಟೆ ಆಂಜನೇಯಸ್ವಾಮಿ ಆವರಣದಲ್ಲಿ ಗಣ್ಯರು ನಂದಿ ಪೂಜೆ ನೆರವೇರಿಸುವ ಮೂಲಕ ದಸರಾ ಮೆರವಣಿಗೆಗೆ ಚಾಲನೆ ಸಿಗಲಿದೆ.
ಆ ಬಳಿಕ ಮಧ್ಯಾಹ್ನ 4.42ರಿಂದ 5.06 ನಿಮಿಷಗಳ ನಡುವಿನ ಶುಭ ಕುಂಭ ಲಗ್ನದಲ್ಲಿ ಅರಮನೆ ಆವರಣದಲ್ಲಿ ಚಿನ್ನದ ಅಂಬಾರಿಯಲ್ಲಿ ಆಸೀನಳಾದ ನಾಡ ಅಧಿದೇವತೆಗೆ ಪುಷ್ಪಾರ್ಚನೆ ಮಾಡುವುದರೊಂದಿಗೆ ಜಂಬೂ ಸವಾರಿ ಆರಂಭವಾಗುತ್ತದೆ. ಗಜಪಡೆಯ ಈ ಮೆರವಣಿಗೆಯು ಸುಮಾರು 5 ಕಿ.ಮೀ.ಗೂ ಹೆಚ್ಚು ದೂರದ ಬನ್ನಿ ಮಂಟಪದವರೆಗೆ ಸಾಗಲಿದೆ. ಅದೇ ದಿನ ಸಂಜೆ ಬನ್ನಿಮಂಟಪದಲ್ಲಿ ಪಂಜಿನ ಕವಾಯತು ಕಾರ್ಯಕ್ರಮದೊಂದಿಗೆ ದಸರಾ ಮಹೋತ್ಸವ ಮುಕ್ತಾಯವಾಗಲಿದೆ.
Laxmi News 24×7