ಬೆಂಗಳೂರು: ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ದರಾಗಿದ್ದು, ಆ ತೀರ್ಮಾನವನ್ನು ನಾನು ಮತ್ತು ಡಿ.ಕೆ. ಶಿವಕುಮಾರ್ ಅನುಸರಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ನಗರದ ಶಾಂಗ್ರಿಲಾ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯ ವೇಳೆ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ನಾಯಕ ಎಂದು ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷ ಬಿಂಬಿಸುತ್ತಿದೆ. ಆದರೆ, ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಕುರಿತು ಸುದ್ದಿ ಇದೆಯಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಆ ವಿಚಾರದಲ್ಲಿ ಹೈಕಮಾಂಡ್ ನಿರ್ಣಯ ತೆಗೆದುಕೊಳ್ಳಲಿದೆ. ಆ ನಿರ್ಣಯವನ್ನು ನಾನು ಮತ್ತು ಡಿ.ಕೆ.ಶಿವಕುಮಾರ್ ಪಾಲಿಸುತ್ತೇವೆ ಎಂದರು.
ನಾವೆಲ್ಲ ಸಿದ್ದರಾಮಯ್ಯ ಪರವಾಗಿದ್ದೇವೆ: ಇದೇ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಐಸಿಸಿ ಒಬಿಸಿ ವಿಭಾಗದ ಅಧ್ಯಕ್ಷ ಡಾ.ಅನಿಲ್ ಜೈಹಿಂದ್ ಮಾತನಾಡಿ, ಆ ರೀತಿಯ ಯಾವ ಪ್ರಸ್ತಾಪವೂ ಇಲ್ಲ. ಒಬಿಸಿ ಪರವಾಗಿ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಇದ್ದಾರೆ. ನಾವೆಲ್ಲಾ ಸಿದ್ದರಾಮಯ್ಯ ಅವರ ಪರವಾಗಿ ಇದ್ದೇವೆ. ಅದು ಹೈಕಮಾಂಡ್ಗೆ ಬಿಟ್ಟ ವಿಚಾರ ಎಂದು ಸ್ಪಷ್ಟಪಡಿಸಿದರು.
ಅದಕ್ಕೆಲ್ಲ ಪೂರ್ಣವಿರಾಮ ಬಿದ್ದಿದೆ: ಇದೇ ವಿಚಾರವಾಗಿ ಮಾತನಾಡಿದ ಬಿ.ಕೆ.ಹರಿಪ್ರಸಾದ್, ನಾಯಕತ್ವ ಬದಲಾವಣೆ ಎಂಬುವುದು ಬಿಜೆಪಿ ಸೃಷ್ಟಿಸುತ್ತಿರುವ ಗೊಂದಲ. ಇದಕ್ಕೆಲ್ಲ ಇದೀಗ ಪೂರ್ಣವಿರಾಮ ಬಿದ್ದಿದೆ. ಈ ಬಗ್ಗೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಸಿದ್ದರಾಮಯ್ಯ ನಾನೇ 5 ವರ್ಷ ಸಿಎಂ ಎಂದು ಹೇಳಿದ್ದಾರೆ. ಇದಕ್ಕೆ ಡಿಕೆಶಿ ಅವರು ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಅದೆಲ್ಲವೂ ಮುಕ್ತಾಯಗೊಂಡಿದೆ. ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ ಹಿಂದುಳಿದ ವರ್ಗಗಳ ನಾಯಕರಿಗೆ ಸದಾ ಬೆಂಬಲ ನೀಡುತ್ತಿದೆ ಎಂದರು.
ಜಾತಿಗಣತಿಗೆ ಕರ್ನಾಟಕ ಮಾದರಿ ಯಾಕಿಲ್ಲ?: ಜಾತಿ ಗಣತಿಯನ್ನು ತೆಲಂಗಾಣ ಮಾದರಿಯಲ್ಲಿ ಮಾಡುವಂತೆ ಎಐಸಿಸಿ ಒಬಿಸಿ ಸಲಹಾ ಸನಿತಿ ಸಭೆಯಲ್ಲಿ ನಿರ್ಣಯ ಕೈಗೊಂಡ ಬಗ್ಗೆ ಸಮಜಾಯಿಶಿ ನೀಡಿದ ಸಿಎಂ ಸಿದ್ದರಾಮಯ್ಯ, 2015ನೇ ಇಸವಿಯಲ್ಲಿ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಸಮೀಕ್ಷೆ ಕೈಗೊಳ್ಳಲು ಹಿಂದುಳಿದ ವರ್ಗದ ಆಯೋಗಕ್ಕೆ ಆದೇಶ ನೀಡಲಾಗಿತ್ತು. ಕೇವಲ ಹಿಂದುಳಿದ ವರ್ಗವಲ್ಲದೇ ಎಲ್ಲ ಜನರನ್ನು ಸಮೀಕ್ಷೆಗೆ ಒಳಪಡಿಸಲು ಸೂಚನೆ ನೀಡಲಾಗಿದ್ದು, ಆಯೋಗವು ಸಮೀಕ್ಷೆಯನ್ನು ನಡೆಸಿತು. 2018ರಲ್ಲಿ ಸಮ್ಮಿಶ್ರ ಸರ್ಕಾರದ ಅಧಿಕಾರಕ್ಕೆ ಬಂದಾಗ, ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅವರು ವರದಿಯನ್ನು ನೀಡಲು ಕಾಲಾವಕಾಶ ನೀಡುವಂತೆ ಅಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರನ್ನು ಕೋರಿದ್ದರು ಎಂದು ಹೇಳಿದರು.
ಆಯೋಗದ ಕೋರಿಕೆಯನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಮನ್ನಿಸಲಿಲ್ಲ. ಅಂದು ಸಚಿವರಾಗಿದ್ದ ಪುಟ್ಟರಂಗ ಶೆಟ್ಟಿಯವರು ಆಯೋಗಕ್ಕೆ ಕಾಲಾವಕಾಶವನ್ನು ನೀಡಿದರೂ, ವರದಿಯನ್ನು ಸ್ವೀಕರಿಸದಂತೆ ಸಚಿವರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಸೂಚಿಸಿದ್ದರು. ನಂತರ ಬಿಜೆಪಿ ಕೂಡಾ ವರದಿ ಸ್ವೀಕಾರ ಮಾಡಿಲ್ಲ. ಸಮೀಕ್ಷೆ ನಡೆಸಿ ಹತ್ತು ವರ್ಷ ಆಗಿದ್ದರಿಂದ ಮರು ಸಮೀಕ್ಷೆಗೆ ತೀರ್ಮಾನ ಮಾಡಲಾಗಿದೆ. ಮೂರು ತಿಂಗಳಲ್ಲಿ ವರದಿ ನೀಡಲು ಸೂಚನೆ ನೀಡಲಾಗಿದೆ ಎಂದರು. ತೆಲಂಗಾಣ ಸರ್ಕಾರ ಈಗಾಗಲೇ ಜಾತಿ ಸಮೀಕ್ಷೆಯನ್ನು ಜಾರಿಗೊಳಿಸಿದ ಹಿನ್ನೆಲೆಯಲ್ಲಿ ನಿರ್ಣಯದಲ್ಲಿ ತೆಲಂಗಾಣ ಮಾದರಿ ಎಂದು ಉಲ್ಲೇಖಿಸಲಾಗಿದೆ ಎಂದರು.
1931ರ ನಂತರ ಜಾತಿ ಜನಗಣತಿಯನ್ನು ಕೈಗೊಂಡ ಮೊದಲ ರಾಜ್ಯ ಕರ್ನಾಟಕ. ಆದ್ದರಿಂದಲೇ ಅದನ್ನು ‘ಕರ್ನಾಟಕ ಮಾದರಿ’ ಎಂದು ಕರೆಯಲಾಗುತ್ತದೆ ಎಂದು ತಿಳಿಸಿದರು.