ಮೈಸೂರು: ನಾನು ಕಳೆದ ಚುನಾವಣೆಯಲ್ಲಿ ಅಷ್ಟೊಂದು ಕೆಟ್ಟದಾಗಿ ಸೋಲ್ತಿನಿ ಅಂತ ಅಂದುಕೊಂಡಿರಲಿಲ್ಲ ಎಂದು ಮಾಜಿ ಸಿಎಂ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದರು.
2018ರಲ್ಲಿ ನಡೆದ ವಿಧಾನಸಭೆ ಚುನಾವಣೆ ಸೋಲಿನ ಕುರಿತು ಕಾಂಗ್ರೆಸ್ ಜನಾಧಿಕಾರ ಸಭೆಯಲ್ಲಿ ಮಾತನಾಡಿದ ಅವರು, ನಾನು ಹಳ್ಳಿಗಳಿಗೆ ಹೋದಾಗ ಜನರೆಲ್ಲ ಪ್ರೀತಿ ತೋರಿಸಿದರು. ಆದರೆ, ನನ್ನ ಸೋಲಿಗೆ ನಮ್ಮ ಪಕ್ಷದವರು ಕೂಡ ಕಾರಣರಾದರು ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಪಕ್ಷ ಅಂದರೆ ತಾಯಿ ಇದ್ದ ಹಾಗೆ. ಕ್ಷುಲ್ಲಕ ಕಾರಣಕ್ಕೆ ಪಕ್ಷ ದ್ರೋಹ ಮಾಡಬಾರದು. ಅವರಿಗೆ ಇಷ್ಟ ಇಲ್ಲ ಅಂದರೆ ಪಕ್ಷ ಬಿಟ್ಟು ಹೋಗಬೇಕು. ಪಕ್ಷ ಮುಖ್ಯ ಹೊರತು ವ್ಯಕ್ತಿಗಳಲ್ಲ ಎಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ತಮ್ಮ ಸೋಲಿನ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ.ನನ್ನ ಸೋಲಿಸಲು ಬಿಜೆಪಿ-ಜೆಡಿಎಸ್ ಒಪ್ಪಂದ ಮಾಡಿಕೊಂಡಿದರು. ಅದಕ್ಕೆ ನನ್ನ ಸೋಲಿಸಲು ಬಿಜೆಪಿ ಗ್ರಾಮ ಪಂಚಾಯ್ತಿ ಸದಸ್ಯನನ್ನ ನಿಲ್ಲಿಸಿದರು. ಒಬ್ಬ ಸಿಎಂ ಅಭ್ಯರ್ಥಿ ಎದುರು ಬಿಜೆಪಿ ಗ್ರಾಮ ಪಂಚಾಯ್ತಿ ಅಭ್ಯರ್ಥಿಯನ್ನ ಹಾಕಿದರು. ಇದಕ್ಕೆಲ್ಲಾ ಕಾರಣ ಒನ್ಲಿ ಹೊಟ್ಟೆ ಉರಿ. ಯಾವ ಮುಖ್ಯಮಂತ್ರಿಯೂ ಐದು ವರ್ಷ ಪೂರೈಸಿಲ್ಲ. ಆದರೆ, ನಾನು ಐದು ವರ್ಷ ಪೂರೈಸಿದ್ನಲ್ಲ ಅದು ಇವರಿಗೆಲ್ಲ ಹೊಟ್ಟೆ ಉರಿ. ನಾನು ಸೋತಿದ್ದಕ್ಕೆ ಬೇಸರವಿಲ್ಲ, ಈ ರೀತಿ ಸೋತಿದ್ದು ಮರ್ಮಾಘಾತವಾಯ್ತು ಎಂದಿದ್ದಾರೆ.