ಬೆಂಗಳೂರು : ಕಂದಾಯ ಇಲಾಖೆ ಎಲ್ಲಾ ನೌಕರರ ಸಹಕಾರದಿಂದ ಜನಪರವಾಗುತ್ತಿದೆ. ಪರಿವರ್ತನೆಯ ಹಾದಿಯಲ್ಲಿದೆ ಹಾಗೂ ಹೊಸ ಆಧುನಿಕ ತಂತ್ರಜ್ಞಾನಕ್ಕೂ ಒಗ್ಗಿಕೊಳ್ಳುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯಪಟ್ಟರು.
ವಿಧಾನಸೌಧದ ಮೆಟ್ಟಿಲುಗಳ ಮೇಲೆ ಇಂದು ನಡೆದ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಹಾಗೂ ಇಲಾಖೆಯ ನೌಕರರ ಸಂಘಗಳ 36ನೇ ರಾಷ್ಟ್ರೀಯ ಭೂಮಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ”ಸರ್ವೇ ಇಲಾಖೆ ಇಡೀ ಸರ್ಕಾರಕ್ಕೆ ಮೂಲ ಇಲಾಖೆ. ಯಾವುದೇ ಭೂಮಿಗೆ ದಾಖಲೆಗಳ ಮೂಲಕ ಅಸ್ತಿತ್ವ ಕಲ್ಪಿಸುವ ಮಹತ್ವದ ಕಾರ್ಯ ಸರ್ವೇ ಇಲಾಖೆಯದ್ದು. ಹೀಗಾಗಿ ಈ ಇಲಾಖೆಯನ್ನು ನೌಕರರ ಸಹಕಾರದಿಂದ ಹೊಸ ಆಧುನಿಕ ತಂತ್ರಜ್ಞಾನಕ್ಕೆ ತೆರೆದುಕೊಳ್ಳುವಂತೆ ಮಾಡಲಾಗಿದೆ. ಆ ಮೂಲಕ ಇಲಾಖೆಯನ್ನು ಮತ್ತಷ್ಟು ಜನಪರಗೊಳಿಸುವ ಪರಿವರ್ತನೆಯ ಹಾದಿಯಲ್ಲಿ ಮುನ್ನಡೆಸಲಾಗುತ್ತಿದೆ”
ಎಂದರು.”ಹತ್ತಾರು ವರ್ಷಗಳಿಂದ ಬಾಕಿ ಇದ್ದ ರೈತರ ಕೆಲಸಗಳನ್ನು ಕಳೆದ ಎರಡು ವರ್ಷಗಳಲ್ಲಿ ಅಭಿಯಾನದ ಮಾದರಿಯಲ್ಲಿ ನಡೆಸಲಾಗುತ್ತಿದೆ. ಗ್ರಾಮಠಾಣಾ ಹಾಗೂ ನಗರ ಪ್ರದೇಶಗಳಲ್ಲಿ ಜನ ನೆಮ್ಮದಿಯಿಂದ ಜೀವಿಸಲು ಆಸ್ತಿಯ ನಕ್ಷೆ ಅವಶ್ಯ ಎಂದು ಅರ್ಥ ಮಾಡಿಕೊಂಡು ಸ್ವಾಮಿತ್ವ ಯೋಜನೆಯಡಿ ಗ್ರಾಮ ಠಾಣಾಗಳನ್ನು ಕರ್ನಾಟಕದಲ್ಲಿ ಮೊದಲ ಬಾರಿಗೆ ಸರ್ವೇ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಜೊತೆಗೆ ನಗರ ಆಸ್ತಿ ಮಾಲೀಕತ್ವವನ್ನೂ ನೀಡಲಾಗುತ್ತಿದೆ. ಇದೇ ಮಾದರಿಯನ್ನು ಅನುಕರಿಸಿ ಕೇಂದ್ರ ಸರ್ಕಾರ ದೇಶಾದ್ಯಂತ ‘ನಕ್ಷಾ’ ಕಾರ್ಯಕ್ರಮ ನಡೆಸುತ್ತಿದೆ. ನಮ್ಮ ರಾಜ್ಯದಲ್ಲೂ 10 ಗ್ರಾಮ ಪಂಚಾಯತ್ ಹಾಗೂ ನಗರಸಭೆ ಆಯ್ಕೆ ಮಾಡಿಕೊಂಡು ಕಳೆದ ಮೂರು ತಿಂಗಳಿಂದ ಗ್ರಾಮೀಣ-ನಗರ ಪ್ರದೇಶಗಳಲ್ಲಿ ವಸತಿ ನಿವೇಶನಗಳಿಗೆ ಆಸ್ತಿ ಪ್ರಮಾಣಪತ್ರ ನೀಡುತ್ತಿದೆ. ಆದರೆ, ಈ ಮಹತ್ವಾಕಾಂಕ್ಷೆಯ ಕೆಲಸಕ್ಕೆ ಬುನಾದಿ ಹಾಕಿದ್ದು ಕರ್ನಾಟಕ ಎಂದು” ಅವರು ಹರ್ಷ ವ್ಯಕ್ತಪಡಿಸಿದರು.