ಮೈಸೂರು : ಮಾ. 22ರಂದು ಕನ್ನಡಪರ ಸಂಘಟನೆಗಳು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹಾಗೂ ಬೆಳಗಾವಿಯಲ್ಲಿ ಕನ್ನಡಿಗರ ಮೇಲಿನ ದಬ್ಬಾಳಿಕೆ ಖಂಡಿಸಿ ಕರೆ ನೀಡಿರುವ ಕರ್ನಾಟಕ ಬಂದ್ಗೆ ಎಲ್ಲರೂ ಬೆಂಬಲ ನೀಡುವಂತೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮನವಿ ಮಾಡಿದ್ದಾರೆ. ನಗರದಲ್ಲಿಂದು ಈಟಿವಿ ಭಾರತದ ಜೊತೆ ಮಾತನಾಡಿದ ಅವರು ಈ ಬಂದ್ ಏಕೆ ಎಂಬ ಕುರಿತು ಮಾಹಿತಿ ನೀಡಿದರು.
ಬೆಳಗಾವಿಯ ಕೆಲವೆಡೆ ಕನ್ನಡಿಗನ ಮೇಲೆ ಮರಾಠಿಗರ ದಬ್ಬಾಳಿಕೆ ಹೆಚ್ಚಾಗಿದ್ದು, ಇದನ್ನ ಖಂಡಿಸಿ ಮಾ. 22ರಂದು ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ಗೆ ಕರೆ ನೀಡಿವೆ. ಇದಲ್ಲದೇ ಮಹದಾಯಿ, ಕಳಸಾ ಬಂಡೂರಿ ಹಾಗೂ ಮೇಕೆದಾಟು ಯೋಜನೆ ಜಾರಿ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನಾ ಜಾಥಾ ನಡೆಸಲಾಗುತ್ತದೆ. ಕನ್ನಡಿಗರಿಗಾಗಿ, ಕನ್ನಡಗರ ಸ್ವಾಭಿಮಾನಕ್ಕಾಗಿ ಈ ಬಂದ್ ಅನ್ನು ನಡೆಸಲಾಗುತ್ತಿದೆ. ರಾಜ್ಯ ಬಂದ್ಗೆ ಎಲ್ಲಾ ಸಂಘಟನೆಯವರು ಬೆಂಬಲಿಸಬೇಕು ಎಂದು ವಾಟಾಳ್ ನಾಗರಾಜ್ ಮನವಿ ಮಾಡಿದರು.
ಚಿತ್ರ ನಟ ರಿಷಭ್ ಶೆಟ್ಟಿ ಅವರು ಶಿವಾಜಿ ಕುರಿತಾದ ಜೀವನ ಚರಿತ್ರೆ ಆಧಾರಿತ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಅವರು ಶಿವಾಜಿ ಪಾತ್ರದಲ್ಲಿ ನಟಿಸುವುದು ಬೇಡ. ಬೇಕಿದ್ದರೇ ಕನ್ನಡಿಗರ ಮಹಾ ನಾಯಕರ ಚಿತ್ರ ಮಾಡಲಿ. ಕನ್ನಡದಲ್ಲಿಯೇ ಬೇಕಾದಷ್ಟು ಐತಿಹಾಸಿಕ ಪುರುಷರಿದ್ದು, ಅವರ ಜೀವನ ಚರಿತ್ರೆ ಆಧಾರಿತ ಚಿತ್ರದಲ್ಲಿ ನಟಿಸಲಿ. ಶಿವಾಜಿ ಪಾತ್ರದಲ್ಲಿ ನಟಿಸಿದರೆ ಚಿತ್ರ ಬಿಡುಗಡೆಯಾಗದಂತೆ ಹೋರಾಟ ಮಾಡುತ್ತೇವೆ. ನಿಮ್ಮ ಬಗ್ಗೆ ನಮಗೆ ಬಹಳಷ್ಟು ಗೌರವಿದೆ. ನಮ್ಮ ಈ ಮನವಿಯನ್ನು ಗೌರವಯುತವಾಗಿ ಸ್ವೀಕರಿಸುವಂತೆ ವಾಟಾಳ್ ನಾಗರಾಜ್ ಹೇಳಿದರು.
ಅಂದಿನ ಕರ್ನಾಟಕ ಬಂದ್ಗೆ ಯಾವ ಯಾವ ಸಂಘಟನೆಗಳು ಬೆಂಬಲ ನೀಡಲಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇಡೀ ರಾಜ್ಯವೇ ನಮ್ಮ ಈ ಹೋರಾಟಕ್ಕೆ ಬೆಂಬಲ ನೀಡಿಲಿದೆ. ಈ ಬಂದ್ಗೆ ರಾಜ್ಯದ ಎಲ್ಲ ವಾಹನಗಳ ಚಾಲಕರು, ಚಿತ್ರರಂಗ, ನಟ-ನಟಿಯರು, ಚಿತ್ರಮಂದಿರದ ಮಾಲೀಕರು ಹಾಗೂ ಎಲ್ಲಾ ಸಂಘಟನೆಯವರು ಬೆಂಬಲ ನೀಡಬೇಕೆಂದು ವಾಟಾಳ್ ನಾಗರಾಜ್ ಮನವಿ ಮಾಡಿದರು.