Breaking News

ಇದು ಮುಸ್ಲಿಮರ ಬಜೆಟ್‌:ಬಿಜೆಪಿ ನಾಯಕರ ಕಿಡಿ

Spread the love

ಬೆಂಗಳೂರು: “ಕಾಂಗ್ರೆಸ್‌ ಸರ್ಕಾರ ಜನ ವಿರೋಧಿ ಹಾಗೂ ಮುಸ್ಲಿಮರ ಬಜೆಟ್‌ ಮಂಡಿಸಿದೆ. ಜೊತೆಗೆ ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ದಾಖಲೆಯಂತೆ 1.16 ಲಕ್ಷ ಕೋಟಿ ರೂ. ಸಾಲ ಮಾಡಲಾಗಿದೆ” ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ್ ವ್ಯಕ್ತಪಡಿಸಿದ್ದಾರೆ.

ಬಜೆಟ್‌ ಮಂಡನೆ ಬಳಿಕ ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮುಖ್ಯಮಂತ್ರಿ ಸಿದ್ದರಾಮಯ್ಯ ಕೊನೆಯ ಬಜೆಟ್‌ ಮಂಡಿಸಿದ್ದಾರೆ. ಈ ಬಜೆಟ್‌ನಲ್ಲಿ ಯಾವುದೇ ಹೊಸ ಘೋಷಣೆ ಇಲ್ಲ. ಆದರೆ, ತಿಪ್ಪೆ ಸಾರಿಸುವಂತೆ ಹಿಂದಿನ ಕಾರ್ಯಕ್ರಮಗಳನ್ನು ಮುಂದುವರಿಸಲಾಗಿದೆ. ಹಳೆ ಮೈಸೂರು ಅಥವಾ ಉತ್ತರ ಕರ್ನಾಟಕಕ್ಕೆ ನೀರಾವರಿ ಯೋಜನೆಗಳನ್ನು ಕೇಂದ್ರ ಸರ್ಕಾರದ ಅನುಮತಿ ಬಳಿಕ ಮುಂದುವರಿಸುತ್ತೇವೆ ಎಂದು ತಿಳಿಸಲಾಗಿದೆ. ಇದನ್ನು ಓದಿ ಪುಟಗಳನ್ನು ವ್ಯರ್ಥ ಮಾಡಲಾಗಿದೆ” ಎಂದು ಟೀಕಿಸಿದರು.

“ಕರ್ನಾಟಕದ ಇತಿಹಾಸದಲ್ಲಿ ಒಂದೇ ವರ್ಷದಲ್ಲಿ ಅತ್ಯಧಿಕ ಅಂದರೆ 1,16,170 ಕೋಟಿ ರೂ. ಸಾಲ ಮಾಡಲಾಗಿದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯಾಗಿದೆ. ಒಟ್ಟು ಸಾಲದ ಪ್ರಮಾಣ 7,81,095 ಕೋಟಿ ರೂ.ಗೆ ಏರಿದೆ. ಅಬಕಾರಿ ಇಲಾಖೆಗೆ 60,000 ಕೋಟಿ ರೂ. ಗುರಿ ನೀಡಿ, ಹೊಸ ಬಾರ್‌ಗಳನ್ನು ಘೋಷಿಸಲಾಗಿದೆ. ಇದನ್ನು ಕಾಂಗ್ರೆಸ್‌ ಶಾಸಕರ ಬಾಯಿ ಮುಚ್ಚಿಸಲು ಮಾಡಲಾಗಿದೆ. ಇದರಿಂದ 40,000 ಕೋಟಿ ರೂ. ಆದಾಯ ಬರಲಿದೆ. ಅನ್ನಭಾಗ್ಯ ಹೋಗಿ ಕುಡುಕರ ಭಾಗ್ಯ ಬಂದಿದೆ. 4-5 ಸಾವಿರ ಕೋಟಿ ರೂ. ಆದಾಯ ಹೆಚ್ಚಿಸಲು ಈ ಕ್ರಮ ವಹಿಸಲಾಗಿದೆ” ಎಂದರು.

“ಕಳೆದ ಬಜೆಟ್‌ನಲ್ಲೂ ಯಾವುದೇ ತೆರಿಗೆ ಘೋಷಣೆ ಮಾಡಿರಲಿಲ್ಲ. ಬಳಿಕ ತೆರಿಗೆಗಳನ್ನು ಹೆಚ್ಚಿಸಲಾಯಿತು. ಈ ಬಾರಿಯೂ ಬಜೆಟ್‌ ನಂತರ ತೆರಿಗೆ ಏರಿಕೆ ಮಾಡಲಾಗುತ್ತದೆ. ಬಸವರಾಜ ಬೊಮ್ಮಾಯಿ ಬಜೆಟ್‌ ಮಂಡನೆ ಮಾಡಿದಾಗ, ಅದು ಹೆಚ್ಚುವರಿಯಾಗಿತ್ತು. ಕಾಂಗ್ರೆಸ್‌ ಕೊರತೆ ಬಜೆಟ್‌ ಮಂಡಿಸಿದೆ. 193 ಪುಟಗಳಲ್ಲಿ ಹೊಸತನವೇ ಇಲ್ಲ” ಎಂದು ಹೇಳಿದರು.

ಮುಸ್ಲಿಮರ ಬಜೆಟ್‌: “ಇದು ಕೇವಲ ಮುಸ್ಲಿಮರ ಬಜೆಟ್‌. ಮುಸ್ಲಿಮರ ಜಟಕಾ ಗಾಡಿ ಏರಿಕೊಂಡು ಸಿದ್ದರಾಮಯ್ಯ ಪ್ರಯಾಣ ಮಾಡಿದ್ದಾರೆ. ಅಲ್ಪಸಂಖ್ಯಾತರ ಕಾಲೊನಿ ಅಭಿವೃದ್ಧಿಗೆ 1,000 ಕೋಟಿ ರೂ. ನೀಡಲಾಗಿದೆ. ವಕ್ಫ್‌ ಬೋರ್ಡ್‌ ಮುಚ್ಚಿ ಎಂದರೆ, ಅದಕ್ಕೆ 150 ಕೋಟಿ ರೂ. ನೀಡಿದ್ದಾರೆ. ಮುಸ್ಲಿಮರ ವಿದೇಶ ಪ್ರಯಾಣಕ್ಕೆ 30 ಲಕ್ಷ ರೂ. ನೀಡಲಾಗುತ್ತದೆ. ಆದರೆ, ಗುರುದ್ವಾರಗಳಿಗೆ ಕೇವಲ 2 ಕೋಟಿ ರೂ. ನೀಡಲಾಗಿದೆ. ಮುಸ್ಲಿಮರ ಓಟಿನ ಋಣ ತೀರಿಸಲು ಈ ಬಜೆಟ್‌ ನೀಡಲಾಗಿದೆ” ಎಂದು ದೂರಿದರು.

“ಎತ್ತಿನಹೊಳೆ ಪೂರ್ಣಗೊಳಿಸಲಾಗುವುದು ಎಂದಿದ್ದಾರೆ. ಆದರೆ ಹಣ ಎಷ್ಟು ನಿಗದಿ ಮಾಡಿದ್ದಾರೆ ಎಂದು ಹೇಳಿಲ್ಲ. ತುಂಗಾ, ಕೃಷ್ಣೆ ಮೊದಲಾದ ನೀರಾವರಿ ಯೋಜನೆಗಳಿಗೆ ಹಣ ನೀಡಿಲ್ಲ. ಅಭಿವೃದ್ಧಿಗೆ ಒಂದು ತೊಟ್ಟು ನೀರು ಕೂಡ ಕೊಟ್ಟಿಲ್ಲ. ಬೆಂಗಳೂರಿನಲ್ಲಿ ಎಲ್ಲವನ್ನೂ ಸುರಂಗ ಮಾಡಲು ಯೋಜನೆ ರೂಪಿಸಿದ್ದಾರೆ. 40,000 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಘೋಷಿಸಲಾಗಿದೆ. ಫೆರಿಫರಲ್‌ ರಿಂಗ್‌ ರಸ್ತೆಯನ್ನೇ ಇನ್ನೂ ಮಾಡಿಲ್ಲ. ಇನ್ನು ಸುರಂಗ ಯೋಜನೆ ಮಾಡಲು ಯಾರೂ ಮುಂದೆ ಬರಲ್ಲ. ಬೆಂಗಳೂರಿನ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ರಸ್ತೆ ಗುಂಡಿ ಮುಚ್ಚುವ, ಕಸದ ಸಮಸ್ಯೆ ಪರಿಹರಿಸುವ ಬಗ್ಗೆ ಹೇಳಿಲ್ಲ. ಚುನಾವಣೆ ಇರುವುದರಿಂದ ಇಂತಹ ಬೋಗಸ್‌ ಬಜೆಟ್‌ ಮಂಡಿಸಲಾಗಿದೆ” ಎಂದು ಟೀಕಿಸಿದರು


Spread the love

About Laxminews 24x7

Check Also

ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್

Spread the love ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್ ಖಾನಾಪೂರ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ