ಬೆಂಗಳೂರು: ಬೆಳ್ತಂಗಡಿ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆಗೆ ಸಂಬಂಧಿಸಿದಂತೆ ಯೂಟ್ಯೂಬ್ನಲ್ಲಿ ವಿಡಿಯೋ ಪೋಸ್ಟ್ ಮಾಡಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದ ಆರೋಪದಲ್ಲಿ ವಿಚಾರಣೆಗೆ ಹಾಜರಾಗುವಂತೆ ಯೂಟ್ಯೂಬರ್ ಸಮೀರ್ ಎಂ.ಡಿ. ಎಂಬವರಿಗೆ ಪೊಲೀಸರು ಜಾರಿ ಮಾಡಿದ್ದ ನೋಟಿಸ್ಗೆ ಹೈಕೋರ್ಟ್ ತಡೆ ನೀಡಿದೆ.
ಎಫ್ಐಆರ್ ನೀಡದೆಯೂ ವಿಚಾರಣೆ ಹಾಜರಾಗುವಂತೆ ಜಾರಿ ಮಾಡಿದ್ದ ನೋಟಿಸ್ ಪ್ರಶ್ನಿಸಿ ಸಮೀರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿ, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.
ವಿಚಾರಣೆ ವೇಳೆ, ಇಡೀ ವಿಡಿಯೋದಲ್ಲಿ ಯಾವುದೇ ಧರ್ಮದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತೆ ಮಾತುಗಳನ್ನು ಆಡಿಲ್ಲ. ಆದರೂ, ಎಫ್ಐಆರ್ ಪ್ರತಿ ಇಲ್ಲದೇ ಕಚೇರಿಗೆ ತೆರಳಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ ಎಂದು ಪೀಠಕ್ಕೆ ವಿವರಿಸಿದರು.
ಈ ವೇಳೆ ಪೀಠ, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜೊತೆಗೆ ಎಫ್ಐಆರ್ ಇರಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಈ ಸಂಬಂಧ ಸುತ್ತೋಲೆ ಹೊರಡಿಸಿದೆ. ಈ ಅಲ್ಲದೇ, ದೂರು ಯಾರು ನೀಡಿದ್ದಾರೆ ಎಂಬುದು ಗೊತ್ತಿಲ್ಲ. ಆದರೂ ನೋಟಿಸ್ ನೀಡುವುದಕ್ಕೆ ಹೇಗೆ ಸಾಧ್ಯ ಎಂದು ಪೀಠ ಪ್ರಶ್ನಿಸಿತು.ಇದಕ್ಕೆ ಸರ್ಕಾರದ ಪರ ವಕೀಲರು,” ಅರ್ಜಿದಾರರನ್ನು ಬಂಧಿಸಿಲ್ಲ” ಎಂದು ತಿಳಿಸಿದರು. ಇದಕ್ಕೆ ಪೀಠ, ”ನೋಟಿಸ್ ಜಾರಿ ಮಾಡಿದ್ದು, ಹಾಜರಾಗದಿದ್ದರೆ ಮುಂದಿನ ನಡೆಯೇ ಬಂಧನ ಆಗುತ್ತಿತ್ತು. ನಿಯಮಗಳ ಪ್ರಕಾರ ನೋಟಿಸ್ ಜಾರಿ ಮಾಡದಿದ್ದಲ್ಲಿ ಹಾಜರಾಗಲು ಅವಕಾಶ ನೀಡಲಾಗುವುದಿಲ್ಲ” ಎಂದು ಹೇಳಿತು.