ದೊಡ್ಡಬಳ್ಳಾಪುರ: ಹೊಟ್ಟೆನೋವು ಎಂದು 45 ವರ್ಷದ ಮಹಿಳೆಯೊಬ್ಬರು ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದು, ತಪಾಸಣೆ ನಡೆಸಿದ ವೈದ್ಯರು ಆಕೆಯ ಉದರದಲ್ಲಿದ್ದ 5 ಕೆ.ಜಿ ಗೆಡ್ಡೆಯನ್ನು ಹೊರತೆಗೆದಿದ್ದಾರೆ.
ದೊಡ್ಡಬಳ್ಳಾಪುರ ನಗರದ 45 ವರ್ಷದ ಮಹಿಳೆ ಕಳೆದ ಮೂರು ತಿಂಗಳಿಂದ ಹೊಟ್ಟೆ ನೋವಿನಿಂದ ನರಳುತ್ತಿದ್ದರು. ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದ ಆಕೆ, ವೈದ್ಯರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಡಾ.ಅರ್ಚನಾ ಅವರು ಪರೀಕ್ಷೆ ನಡೆಸಿದ್ದು, ಸ್ಕ್ಯಾನಿಂಗ್ನಲ್ಲಿ ಹೊಟ್ಟೆಯಲ್ಲಿ 5 ಕೆ.ಜಿ ಗಾತ್ರದ ಗೆಡ್ಡೆ ಇರುವುದು ಪತ್ತೆಯಾಗಿದೆ.
ಬಳಿಕ ಡಾ.ಅರ್ಚನಾ ನೇತೃತ್ವದ ತಂಡ ಸತತ ಎರಡು ಗಂಟೆ ಶಸ್ತ್ರಚಿಕಿತ್ಸೆ ನಡೆಸಿ ಗೆಡ್ಡೆಯನ್ನು ಹೊರಗೆ ತೆಗೆದಿದ್ದಾರೆ. ಇದೀಗ ಮಹಿಳೆಯ ಆರೋಗ್ಯ ಸ್ಥಿರವಾಗಿದ್ದು, ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚಿನ ಪರೀಕ್ಷೆಗಾಗಿ ಗೆಡ್ಡೆಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.ಶಸ್ತ್ರಚಿಕಿತ್ಸೆ ನಡೆಸಿದ ಡಾ.ಅರ್ಚನಾ ನೇತೃತ್ವದ ವೈದ್ಯರ ತಂಡವನ್ನು ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ರಮೇಶ್, ಟಿಎಚ್ಒ ಡಾ.ಶಾರದಾ ನಾಗನಾಥ್ ಹಾಗು ಡಾ.ಮಂಜುನಾಥ್ ಅಭಿನಂದಿಸಿದ್ದಾರೆ.