Breaking News

ಪ್ರಸ್ತುತ ನಾವು ಬಳಕೆ ಮಾಡುತ್ತಿರುವ ಧ್ವಜ ಬೇರೊಂದು ಪಕ್ಷದ ಧ್ವಜವಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

Spread the love

ಬೆಂಗಳೂರು: ಕರ್ನಾಟಕದ ಹೆಸರಿಗೆ ಇಂದು 50ರ ಸಂಭ್ರಮ. ನಾಡಿನೆಲ್ಲೆಡೆ ಸಡಗರ ಸಂಭ್ರಮದಿಂದ ಹಳದಿ ಮತ್ತು ಕೆಂಪು ಬಣ್ಣದ ನಾಡಧ್ವಜಗಳು ಹಾರಾಡುತ್ತಿವೆ.

ಆದರೆ ಈ ಧ್ವಜ ಅಧಿಕೃತ ನಾಡಧ್ವಜವಾ? ಈ ಧ್ವಜವನ್ನು ಯಾರು ರಚಿಸಿದ್ದು, ಸರ್ಕಾರ ನಾಡಧ್ವಜದ ವಿಚಾರದಲ್ಲಿ ಏನೆಲ್ಲಾ ಮಾಡಿದೆ. ನಾಡಧ್ವಜ ಹೊಂದಲು ಸಾಂವಿಧಾನಿಕ ಮಾನ್ಯತೆ ಇದೆಯಾ ಎನ್ನುವ ಕುರಿತ ವರದಿ ಇಲ್ಲಿದೆ.

1956ರಲ್ಲಿಯೇ ಕನ್ನಡಿಗರ ವಾಸಿಸುವ ಪ್ರದೇಶಗಳನ್ನು ಒಳಗೊಂಡು ರಾಜ್ಯ ಏಕೀಕರಣಗೊಂಡರೂ ಕರ್ನಾಟಕದ ಹೆಸರು ಪಡೆಯಲು 17 ವರ್ಷ ಹೋರಾಟ ನಡೆಸಲಾಯಿತು. 1973ರಲ್ಲಿ ಕಡೆಗೂ ವಿಶಾಲ ಮೈಸೂರು ರಾಜ್ಯ ಕರ್ನಾಟಕ ರಾಜ್ಯ ಎನ್ನುವ ಹೆಸರನ್ನು ಅಧಿಕೃತವಾಗಿ ಪಡೆದುಕೊಂಡಿತಾದರೂ ಈವರೆಗೆ ಅಧಿಕೃತ ನಾಡಧ್ವಜವನ್ನು ಹೊಂದಬೇಕು ಎನ್ನುವ ಕನ್ನಡಿಗರ ಕನಸು ಇನ್ನು ಕನಸಾಗಿಯೇ ಇದೆ. ಹಳದಿ ಕೆಂಪು ಬಣ್ಣವನ್ನು ಒಳಗೊಂಡ ಧ್ವಜವೇ ಸದ್ಯಕ್ಕೆ ನಾಡಧ್ವಜದ ಸ್ಥಾನದಲ್ಲಿ ವಿರಾಜಮಾನವಾಗಿದೆ.

ಕನ್ನಡಪರ ಚಳವಳಿ, ಕನ್ನಡ ಹೋರಾಟ, ನಾಡು ನುಡಿಯ ಸಮ್ಮೇಳನದಲ್ಲಿ ಕಂಗೊಳಿಸುವ ಹಳದಿ, ಕೆಂಪು ಬಣ್ಣದ ಧ್ವಜ ಕನ್ನಡಿಗರ ಅಸ್ಮಿತೆಯಾಗಿದೆ. ಇದು ಪಕ್ಷವೊಂದರ ಧ್ವಜವಾಗಿ ರಚಿತವಾದರೂ ಕನ್ನಡಿಗರ ಆಸ್ತಿಯಾಗಿ ಪರಿವರ್ತನೆಯಾಗಿದೆ. ಕನ್ನಡ ಪರ ಸಂಘಟನೆಗಳು, ಕನ್ನಡ ಹೋರಾಟಗಾರರೆಲ್ಲಾ ಈ ಧ್ವಜವನ್ನೇ ಬಳಕೆ ಮಾಡಲು ಆರಂಭಿಸಿದ್ದಾರೆ. ಸರ್ಕಾರವೂ ಕೂಡ ಇದೇ ಧ್ವಜವನ್ನು ಹಾರಿಸಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡುವ ಮೂಲಕ ಈ ಧ್ವಜಕ್ಕೆ ನಾಡಧ್ವಜದ ಸ್ಥಾನಮಾನವನ್ನು ನೀಡಿದೆ.ಕರ್ನಾಟಕ 50ರ ವಿಶೇಷ ವರದಿ

ವಾಸ್ತವದಲ್ಲಿ ಕನ್ನಡದ ವೀರ ಸೇನಾನಿ ಮ.ರಾಮಮೂರ್ತಿ ಅವರು ರಚಿಸಿದ ಕನ್ನಡ ಪಕ್ಷದ ಅಧಿಕೃತ ಬಾವುಟವೇ ಇಂದು ನಾವು ಬಳಸುತ್ತಿರುವ ನಾಡಧ್ವಜವಾಗಿದೆ. ಕನ್ನಡ ಬಾವುಟದ ಹಳದಿ ಬಣ್ಣ ಕನ್ನಡಿಗರ ಸ್ವಾಭಿಮಾನ, ಶಾಂತಿ, ರಕ್ಷಣೆಯ ಪ್ರತೀಕವಾಗಿದೆ. ಕನ್ನಡ ನಾಡು ಚಿನ್ನದ ಬೀಡು ಎನ್ನುವ ಖ್ಯಾತಿ ಗಳಿಸಿದೆ ಎನ್ನುವುದು ಹಳದಿ ಪ್ರತಿನಿಧಿಸಿದರೆ, ಕೆಂಪು ಬಣ್ಣ, ಕನ್ನಡಿಗರ ಕ್ಷಾತ್ರತೇಜ, ತ್ಯಾಗ ಮತ್ತು ಕ್ರಾಂತಿಯ ಪ್ರತೀಕವಾಗಿ ಪ್ರತಿನಿಧಿಸಲಿದೆ ಎಂದು ಮ.ರಾಮಮೂರ್ತಿಯವರೇ ಧ್ವಜ ರಚನೆಯಾದ ನಂತರ ನಡೆದ ಸಮಾವೇಶದಲ್ಲಿ ಸ್ಪಷ್ಟನೆ ನೀಡಿದ್ದರು. ಅದನ್ನೇ ಕನ್ನಡಿಗರು ಕನ್ನಡಪರ ಹೋರಾಟಗಾರರು ನಾಡಧ್ವಜವನ್ನಾಗಿ ಬಳಸುವುದನ್ನು ರೂಢಿಸಿಕೊಂಡಿದ್ದಾರೆ. 60ರ ದಶಕದಲ್ಲಿ ಈ ಬಾವುಟದ ಬಳಕೆ ಆರಂಭವಾಯಿತು. ಗೋಕಾಕ್‌ ಚಳವಳಿ ಸೇರಿದಂತೆ ಕನ್ನಡ ಪರ ಉತ್ಸವ, ಕಾರ್ಯಕ್ರಮದಲ್ಲಿ ಬಳಸಿಕೊಂಡು ಬರಲಾಗಿದೆ. ಇಂದಿಗೂ ಇದೇ ಧ್ವಜ ಬಳಕೆಯಲ್ಲಿದೆ.

ಹಳದಿ ಕೆಂಪು ಬಣ್ಣದ ಧ್ವಜ ಚಾಲ್ತಿಗೆ ಬರುವ ಮೊದಲೇ ನಾಡಧ್ವಜದ ರಚನೆಯ ಕಸರತ್ತುಗಳು ನಡೆದಿದ್ದವು. ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಹಾಗು ಮ. ರಾಮಸ್ವಾಮಿ ಜಂಟಿಯಾಗಿ ಪ್ರಯತ್ನ ನಡೆಸಿದ್ದರು. ಕರ್ನಾಟಕದ ಲಾಂಛನ ಹಾಗು ಪೈರುಗಳನ್ನು ಒಳಗೊಂಡ ಧ್ವಜ ರಚಿಸಿದರು. ಆದರೆ ಅದು ಜನರನ್ನು ತಲುಪಲಿಲ್ಲ, ಸ್ವತಃ ಹೋರಾಟಗಾರರೂ ಪುರಸ್ಕರಿಸಲಿಲ್ಲ. ಹಾಗಾಗಿ ಆ ಧ್ವಜದ ಪ್ರಸ್ತಾಪ ಆರಂಭವಾದಲ್ಲಿಯೇ ನಿಂತಿತು. ಮ.ರಾಮಮೂರ್ತಿ ಅವರು ರಚಸಿಸಿದ ಹಳದಿ, ಕೆಂಪು ಬಣ್ಣದ ಧ್ವಜವನ್ನು ಎಲ್ಲೆಡೆ ಬಳಸಲು ಶುರು ಮಾಡಲಾಯಿತು. ಈ ಧ್ವಜವನ್ನು ರಾಜ್ಯ ಧ್ವಜವನ್ನಾಗಿ ಘೋಷಿಸಬೇಕು ಎಂದು 1998ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಕ್ಕೊತ್ತಾಯ ಮಂಡಿಸಿತು.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ