ಬೆಂಗಳೂರು : ಹಿಂದುಳಿದ ವರ್ಗಗಳಿಗೆ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸೂಕ್ತ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಲು ಜಸ್ಟೀಸ್ ಡಾ.ಕೆ.ಭಕ್ತವತ್ಸಲ ಆಯೋಗವನ್ನು ರಚಿಸಲಾಗಿತ್ತು.
ಈ ಆಯೋಗ ಸಲ್ಲಿಸಿರುವ ವರದಿಯಲ್ಲಿನ ಐದು ಶಿಫಾರಸುಗಳ ಪೈಕಿ ಮೂರು ಶಿಫಾರಸುಗಳನ್ನು ಸಚಿವ ಸಂಪುಟ ಸಭೆ ಅಂಗೀಕಾರ ಮಾಡಿದೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡುತ್ತಾ, ಮುಂಬರುವ ಸ್ಥಳೀಯ ನಗರ ಮತ್ತು ಗ್ರಾಮೀಣ ಸಂಸ್ಥೆಗಳಲ್ಲಿ 33% ರಷ್ಟು ಸ್ಥಾನಗಳನ್ನು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸಲು ಮತ್ತು ಒಟ್ಟಾರೆ ಮೀಸಲಾತಿ ಶೇ.50 ರಷ್ಟು ಮೀರದಿರುವಂತೆ ರಾಜಕೀಯ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಮುಂದುವರೆಸಿಕೊಂಡು ಹೋಗುವ ಶಿಫಾರಸಿಗೆ ಅನುಮೋದನೆ ನೀಡಲಾಗಿದೆ ಎಂದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಮೇಯರ್ ಮತ್ತು ಉಪಮೇಯರ್ ಸ್ಥಾನಗಳಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಿರಿಸುವ ಶಿಫಾರಸಿಗೆ ಒಪ್ಪಿಗೆ ನೀಡಲಾಗಿದೆ. ಎಲ್ಲಾ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣಾ ಶಾಖೆಗಳನ್ನು ಡಿಪಿಎಆರ್ ಹತೋಟಿಗೆ ನೀಡಲು ಭಕ್ತವತ್ಸಲ ಸಮಿತಿ ಮಾಡಿದ ಶಿಫಾರಸನ್ನು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಬಿಬಿಎಂಪಿ ಕಾಯ್ದೆ 2020 ರಂದು ಮೇಯರ್ ಮತ್ತು ಸ್ಥಾನಗಳಿಗೆ 30 ತಿಂಗಳು ನಿಗದಿಪಡಿಸುವ ವ್ಯವಸ್ಥೆಯನ್ನು ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿಸ್ತರಿಸಲು ಕರ್ನಾಟಕ ಮುನ್ಸಿಪಲ್ ಕಾಯ್ದೆಯ ಕಲಂ 10ಕ್ಕೆ ತಿದ್ದುಪಡಿ ತರುವ ಶಿಫಾರಸ್ಸಿಗೆ ಒಪ್ಪಿಗೆ ನೀಡಿಲ್ಲ.
ಅದೇ ರೀತಿ 2027-28ರಲ್ಲಿ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮುನ್ನ ಹಿಂದುಳಿದ ವರ್ಗಗಳ ಕೆಟಗರಿ ಎ ಮತ್ತು ಬಿ ಜೊತೆಗೆ ಅಲ್ಪಸಂಖ್ಯಾತರು ಸೇರಿದಂತೆ ಇತರ ಹಿಂದುಳಿದ ವರ್ಗದವರಿಗಾಗಿ ಪರಿಣಾಮಕಾರಿಯಾದ ರಾಜಕೀಯ ಮೀಸಲು ವ್ಯವಸ್ಥೆ ಕಲ್ಪಿಸಲು ಎರಡು ಹೆಚ್ಚುವರಿ ಕೆಟಗರಿಗಳನ್ನು ಸೇರಿಸಿ ಹಿಂದುಳಿದ ವರ್ಗಗಳ ಮರು ವರ್ಗೀಕರಣ ಮಾಡಲು ಕ್ರಮ ಕೈಗೊಳ್ಳಲು ಜಸ್ಟೀಸ್ ಡಾ.ಕೆ.ಭಕ್ತವತ್ಸಲ ಆಯೋಗ ಶಿಫಾರಸ್ಸಿಗೆ ಒಪ್ಪಿಗೆ ನೀಡಿಲ್ಲ. ಹೀಗಾಗಿ 33% ಒಬಿಸಿ ಮೀಸಲಾತಿ ಅನ್ವಯವಾಗುವುದು ಅನುಮಾನ ಎಂದು ಸಚಿವರು ಹೇಳಿದರು.
33% ಒಬಿಸಿ ಮೀಸಲಾತಿ ಗೊಂದಲ?: ಜನಸಂಖ್ಯೆಯ ಅನುಪಾದಲ್ಲಿ ಎಸ್ಸಿ-ಎಸ್ಟಿ ಒಟ್ಟು ಮೀಸಲಾತಿ ಸೀಟುಗಳ ಪ್ರಮಾಣವನ್ನು 50%ನ ಒಟ್ಟು ಮೀಸಲಾತಿ ಗರಿಷ್ಠ ಮಿತಿಯಿಂದ ಕಳೆದು ಉಳಿಯುವ ಮೀಸಲಾತಿಯನ್ನು ಹಿಂದುಳಿದ ವರ್ಗಕ್ಕೆ ನೀಡಲಾಗುವುದು. ಅದರಂತೆ ಲೆಕ್ಕ ಹಾಕಿದರೆ ಸದ್ಯ ಎಸ್ಸಿ, ಎಸ್ಟಿಗೆ ಒಟ್ಟು 24% ಮೀಸಲಾತಿ ಇದೆ. ಅದನ್ನು 50% ಮೀಸಲಾತಿ ಮಿತಿಯಿಂದ ಕಳೆದರೆ ಉಳಿಯುವ 26% ಮೀಸಲಾತಿ ಒಬಿಸಿ ಪಾಲಾಗಲಿದೆ. ಆದರೆ, ಅದು 33% ಮೀಸಲಾತಿ ಕಲ್ಪಿಸುವುದಿಲ್ಲ. ಈ ಬಗ್ಗೆ ಸಚಿವರಿಂದ ಸ್ಪಷ್ಟನೆ ಸಿಕ್ಕಿಲ್ಲ. 33% ಮೀಸಲಾತಿ ನೀಡಿದರೆ ಅದು 50% ಮಿತಿಯನ್ನು ಮೀರಲಿದೆ. ಅದರ ಜೊತೆಗೆ 10% ಇಡಬ್ಲ್ಯುಎಸ್ ಮೀಸಲಾತಿಯೂ ಇದೆ. ಹೀಗಾಗಿ 33% ಒಬಿಸಿ ಮೀಸಲಾತಿ ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡಿದೆ ಎಂದು ವಿವರಿಸಿದರು.