ಬೆಳಗಾವಿ: ”ನೇಕಾರರ ಬದುಕನ್ನು ಕಸಿದುಕೊಳ್ಳುವ ಕೆಲಸಕ್ಕೆ ಸರಕಾರ ಮುಂದಾಗಬಾರದು” ಎಂದು ಉತ್ತರ ಕರ್ನಾಟಕ ವೃತ್ತಿಪರ ನೇಕಾರ ಹೋರಾಟ ಸಮಿತಿ ಸಂಚಾಲಕ ಗಜಾನನ ಗುಂಜೇರಿ ಆಗ್ರಹಿಸಿದರು.
ಬೆಳಗಾವಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ”ಜಗತ್ತಿನ ಮಾನ ಮುಚ್ಚುವ ನೇಕಾರರ ಬದುಕು ಚಿಂತಾಜನಕವಾಗಿದೆ. ಕಳೆದ ಮೂರು ವರ್ಷಗಳಿಂದ ಮಳೆಯಿಂದಾಗಿ ನೆರೆ ಹಾವಳಿ, ಕೊರೊನಾ ಪರಿಣಾಮ ಹಾಗೂ ಕಚ್ಚಾ ನೂಲಿನ ಬೆಲೆ ಏರಿಕೆ ಸೇರಿದಂತೆ ಅನೇಕ ಸಮಸ್ಯೆಗಳಿಂದ ಬಳಲುತ್ತಿದ್ದೇವೆ. ನೇಕಾರರ ಅಭಿವೃದ್ಧಿಗಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಿಂದಿನ ತಿಂಗಳು 23ನೇ ತಾರೀಖು ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನ ಗೃಹ ಕಚೇರಿಯಲ್ಲಿ ಭೇಟಿಯಾಗಿ ಮನವಿ ಮಾಡಿಕೊಂಡಿದ್ದೇವೆ” ಎಂದರು.
2004- 06ರಲ್ಲಿ ಸಿದ್ದರಾಮಯ್ಯ ಅವರು ಡಿಸಿಎಂ ಆಗಿದ್ದಾಗ 1.25 ರೂ. ದರ ನಿಗದಿಪಡಿಸಲಾಗಿತ್ತು. ಬಳಿಕ 7.45 ರೂ. ಪ್ರತಿ ಯೂನಿಟ್ಗೆ ಹೆಚ್ಚಿಸಲಾಗಿದೆ. ಅಲ್ಲದೇ 70 ರೂ. ಇದ್ದ ಮಿನಿಮಯ ದರ 140ರೂ.ಗೆ ಏರಿಸಿದ್ದಾರೆ. ನೇಕಾರರಿಗೆ 10 ಎಚ್.ಪಿ. ವರೆಗೆ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಚುನಾವಣೆ ಪ್ರಚಾರ ಸಂದರ್ಭದಲ್ಲಿ ಬಾಗಲಕೋಟೆಯಲ್ಲಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದರು. ಅಲ್ಲದೇ ಹಿಂದಿನ ಬೊಮ್ಮಾಯಿ ಸರ್ಕಾರ ಕೂಡ 5 ಎಚ್.ಪಿ. ವರೆಗೆ ಉಚಿತ ವಿದ್ಯುತ್ ನೀಡುವ ಬಗ್ಗೆ ಬಜೆಟ್ನಲ್ಲಿ ಘೋಷಿಸಿತ್ತು. ಆದರೆ, ಚುನಾವಣೆ ಸಂದರ್ಭದಲ್ಲಿ ನಮ್ಮನ್ನು ಬಳಸಿಕೊಂಡು ಹಿಂದಿನ ಎಲ್ಲ ಸರ್ಕಾರಗಳು ನಮಗೆ ಅನ್ಯಾಯ ಮಾಡುತ್ತಿವೆ. ಸಿದ್ದರಾಮಯ್ಯನವರು ಚುನಾವಣೆ ಸಂದರ್ಭದಲ್ಲಿ ಹೇಳಿದಂತೆ 10 ಎಚ್.ಪಿ. ವರೆಗೆ ವಿದ್ಯುತ್ ಉಚಿತ ಕೊಡಬೇಕು. ಜವಳಿ ಇಲಾಖೆಗೆ ಹೆಚ್ಚಿನ ಅನುದಾನ, ನೇಕಾರರನ್ನು ಅಸಂಘಟಿತ ವಲಯಕ್ಕೆ ಸೇರಿಸಬೇಕು. ಶೂನ್ಯ ಬಡ್ಡಿ ದರದಲ್ಲಿ 5 ರಿಂದ 10 ಲಕ್ಷ ರೂಪಾಯಿ ಸಾಲ ನೀಡಬೇಕು. ಹೈಟೆಕ್ ಟೆಕ್ಸ್ಟೈಲ್ ಕಾಲೇಜು, ಟೆಕ್ಸ್ಟೈಲ್ ಸಂಶೋಧನಾ ಕೇಂದ್ರ ಸ್ಥಾಪನೆಯಾಗಬೇಕು” ಎಂದು ಗಜಾನನ ಗುಂಜೇರಿ ಒತ್ತಾಯಿಸಿದರು.
ಕೋವಿಡ್ ವೇಳೆ 39 ನೇಕಾರರ ಆತ್ಮಹತ್ಯೆ: ”ಸರ್ಕಾರದ ವಿವಿಧ ಇಲಾಖೆಗಳು ಖರೀದಿಸುವ ಬಟ್ಟೆಗಳನ್ನು ನೇಕಾರರಿಂದಲೇ ಖರೀದಿಸುವ ಕೆಲಸ ಮಾಡಬೇಕು. ನೇಕಾರರನ್ನು ಅಸಂಘಟಿತ ಕಾರ್ಮಿಕರಂತೆ ಪರಿಗಣಿಸಿ, ಕಟ್ಟಡ ಕಾರ್ಮಿಕರಿಗೆ ಸಿಗುವ ಎಲ್ಲ ಸೌಲಭ್ಯಗಳು ನಮಗೂ ಸಿಗಬೇಕು. ಕೋವಿಡ್ ವೇಳೆ 39 ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮತ್ತೆ ನೇಕಾರರು ಆತ್ಮಹತ್ಯೆ ದಾರಿ ಹಿಡಿಯದಂತೆ ಸರ್ಕಾರ ನೋಡಿಕೊಳ್ಳಬೇಕು. ಅತೀ ಹೆಚ್ಚು ತೆರಿಗೆ ತುಂಬುವ ನಮಗೆ ಯಾವುದೇ ಯೋಜನೆ, ಅನುದಾನವಿಲ್ಲದೇ ಕಂಗಾಲಾಗಿದ್ದೇವೆ. ಗುಜರಾತ್, ತಮಿಳುನಾಡು ರಾಜ್ಯಗಳಿಗೆ ಹೋಲಿಸಿದರೆ ನಮಗೆ ಯಾವುದೇ ರೀತಿ ಸೌಲಭ್ಯಗಳು ಇಲ್ಲ. ಜಿಲ್ಲೆಯಲ್ಲಿ 30 ಸಾವಿರ ಮಗ್ಗಗಳಿದ್ದು, ಒಂದೂವರೆ ಲಕ್ಷ ಜನ ಅವಲಂಬಿತರಾಗಿದ್ದಾರೆ. ಸಂಕಷ್ಟದಲ್ಲಿರುವ ನೇಕಾರರ ನೆರವಿಗೆ ಸರ್ಕಾರ ಕೂಡಲೇ ಧಾವಿಸಬೇಕು” ಎಂದು ಗಜಾನನ ಗುಂಜೇರಿ ಒತ್ತಾಯಿಸಿದರು.