ಬೆಳಗಾವಿ: ಪರಿಸರಕ್ಕೆ ಮಾರಕವಾಗಿರುವ ಪಿಒಪಿ ಗಣೇಶ ಮೂರ್ತಿಗಳ ಮಾರಾಟಕ್ಕೆ ನಿಷೇಧವಿದ್ದರೂ, ಬೆಳಗಾವಿಯಲ್ಲಿ ಹೊರ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ತರಹೇವಾರಿ ಗಣೇಶನ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಹಲವಾರು ವರ್ಷಗಳಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೆ ಮಾತ್ರ ಅನುಮತಿ ನೀಡಬೇಕೆಂದು ಜಿಲ್ಲೆಯ ಪರಿಸರ ಪ್ರೇಮಿಗಳು ಆಗ್ರಹಿಸುತ್ತಿದ್ದಾರೆ.
ಹೌದು, ಗಣೇಶೋತ್ಸವಕ್ಕೆ ಇನ್ನೂ ಒಂದು ತಿಂಗಳು ಬಾಕಿ ಇರುವಾಗ ಬೆಳಗಾವಿಯಲ್ಲಿ ಗಣೇಶ ಮೂರ್ತಿಗಳ ತಯಾರಿಕೆ ಭರದಿಂದ ಸಾಗಿದೆ. ಪರಿಸರ ಸ್ನೇಹಿ ಮೂರ್ತಿ ತಯಾರಕರು, ಮಾರಾಟಗಾರರು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಆದರೆ ಪರಿಸರ ಸ್ನೇಹಿ ಗಣಪನ ಬಳಕೆ ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿರೋದು ಪರಿಸರ ಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಪಿಒಪಿ ಗಣೇಶ ಮಾರಾಟ ನಿಷೇಧ, ಉಲ್ಲಂಘಿಸಿದರೆ ದಂಡ ಜೈಲು ಶಿಕ್ಷೆ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮತ್ತು ಹಾನಿಕಾರಕ ರಾಸಾಯನಿಕಗಳಿಂದ ತಯಾರಿಸಿದ ಗಣೇಶ ಮೂರ್ತಿಗಳ ಮಾರಾಟವನ್ನು ಜುಲೈ 20, 2016ರ ಅಧಿಸೂಚನೆಯ ಪ್ರಕಾರ ಜಲ ಕಾಯಿದೆ, 1974 ರ ಸೆಕ್ಷನ್ 33 (A) ಅಡಿಯಲ್ಲಿ ನಿಷೇಧಿಸಲಾಗಿದೆ.
ಅಪರಾಧಿಗಳು 10 ಸಾವಿರ ರೂ. ದಂಡ ತುಂಬಬೇಕಾಗುತ್ತದೆ. ಅಲ್ಲದೇ 1974 ರ ಜಲ ಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯ್ದೆಯ ಸೆಕ್ಷನ್ 45ಎ ಅಡಿ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಇಷ್ಟೆಲ್ಲ ಕಾಯ್ದೆ ಇದ್ದರೂ, ಬೆಳಗಾವಿ, ಚಿಕ್ಕೋಡಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಕಚೇರಿಗಳಿವೆ. ಪ್ರತ್ಯೇಕ ಪರಿಸರ ಅಧಿಕಾರಿಗಳು ಇದ್ದಾರೆ.
ಆದರೆ ಅಧಿಕಾರಿಗಳ ಕಣ್ತಪ್ಪಿಸಿ, ಬಹಳ ದೊಡ್ಡ ಪ್ರಮಾಣದಲ್ಲಿ ಪಿಒಪಿ ಮೂರ್ತಿಗಳು ಮಾರುಕಟ್ಟೆಗೆ ಬಂದಿದ್ದಾದರೂ ಹೇಗೆ ಎನ್ನುವ ಪ್ರಶ್ನೆ ಪ್ರಜ್ಞಾವಂತರನ್ನು ಕಾಡುತ್ತಿದೆ. ನೆರೆಯ ಮಹಾರಾಷ್ಟ್ರ, ಗೋವಾ ರಾಜ್ಯಗಳಿಂದಲೂ ಮೂರ್ತಿಗಳು ಬರುತ್ತಿದ್ದು, ತಡೆಯುವ ಪ್ರಯತ್ನ ನಡೆದಿಲ್ಲ. ಅಲ್ಲದೇ ಈ ಸಂಬಂಧ ಜಿಲ್ಲಾಡಳಿತ ಈ ವರೆಗೆ ಸಭೆಯನ್ನೂ ಕೂಡ ಮಾಡಿಲ್ಲ.
ಬೆಳಗಾವಿ ಜಿಲ್ಲೆಯಲ್ಲಿ ಬೆರಳಣಿಕೆಯಷ್ಟು ಮಣ್ಣಿನ ಗಣೇಶ ಮೂರ್ತಿ ತಯಾರಕರಿದ್ದು, ಬಹಳಷ್ಟು ವ್ಯಾಪಾರಿಗಳು ಪಿಒಪಿ ಗಣಪನನ್ನು ನೆಚ್ಚಿಕೊಂಡಿದ್ದಾರೆ. ಜನ ಕೂಡ ಬಣ್ಣ ಬಣ್ಣದ ಆಕರ್ಷಕ ಮತ್ತು ಸುಂದರವಾದ ತರಹೇವಾರಿ ಪಿಒಪಿ ಮೂರ್ತಿಗಳಿಗೆ ಹೆಚ್ಚು ಬೇಡಿಕೆ ಇಡುತ್ತಿದ್ದಾರೆ.