ಚಿಕ್ಕೋಡಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ವರುಣನ ಆರ್ಭಟಕ್ಕೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ನದಿಗಳಲ್ಲಿ ನೀರಿನ ಮಟ್ಟ ಪ್ರತಿ ಗಂಟೆಗೂ ಹೆಚ್ಚಳವಾಗುತ್ತಿದ್ದು, ನದಿಗಳು ಮೈದುಂಬಿ ಹರಿಯುತ್ತಿವೆ. ಇದರಿಂದ ಕೆಳಹಂತದ ಏಳು ಸೇತುವೆಗಳು ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತಗೊಂಡಿದೆ. ಕೃಷ್ಣಾ ನದಿ ಹಾಗೂ ವೇದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಏಳು ಕೆಳಹಂತದ ಸೇತುವೆಗಳು ಈಗಾಗಲೇ ಜಲಾವೃತಗೊಂಡು ನದಿಯ ದಂಡೆಯ ಗ್ರಾಮದ ಸಂಪರ್ಕ ಕಡಿತಗೊಂಡಿದೆ. ಚಿಕ್ಕೋಡಿ ತಾಲೂಕಿನ ಮಲಿಕವಾಡ – ದತ್ತವಾಡ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದೆ.
ಒಳಹರಿವು ಹೆಚ್ಚಳವಾದ ಹಿನ್ನೆಲೆ ಸೇತುವೆಗಳು ಜಲಾವೃತ: ನಿಪ್ಪಾಣಿ ತಾಲೂಕಿನ ಕಾರದಗಾ -ಭೋಜ, ಭೋಜವಾಡಿ-ಕುನ್ನೂರ, ಸಿದ್ದಾಳ-ಅಕ್ಕೋಳ, ಜತಾಟ-ಭಿವಶಿ, ಮಮದಾಪೂರ-ಹುನ್ನರಗಿ, ಕುನೂರ-ಬಾರವಾಡ ಸೇತುವೆಗಳು ನದಿಯಲ್ಲಿ ಒಳಹರಿವು ಹೆಚ್ಚಳವಾದ ಹಿನ್ನೆಲೆ ಜಲಾವೃತವಾಗಿವೆ. ಮುಂಜಾಗ್ರತಾ ಕ್ರಮವಾಗಿ ಚಿಕ್ಕೋಡಿ ನಿಪ್ಪಾಣಿ ಪೊಲೀಸರು ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಿ ಸಂಚಾರ ಬಂದ್ ಮಾಡಿದ್ದಾರೆ ಹಾಗೂ ಯಾರು ಸೇತುವೆ ಮೇಲೆ ಸಂಚಾರ ಮಾಡಿದಂತೆ ನಾಮಫಲಕ ಅಳವಡಿಸಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಹಿಪ್ಪರಗಿ ಬ್ಯಾರೇಜ್ 82,300 ಕ್ಯೂಸೆಕ್ ಒಳಹರಿವು: ಮಹಾರಾಷ್ಟ್ರ ಪಶ್ಚಿಮ ಘಟ್ಟದಲ್ಲಿ ಸುರಿದ ಭಾರಿ ಮಳೆಗೆ ವೇದ ಗಂಗಾ, ದೂದ್ ಗಂಗಾ, ಪಂಚಗಂಗಾ, ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದ್ದರಿಂದ ಒಳಹರಿವು ಹೆಚ್ಚಿದೆ. ಪ್ರತಿಕ್ಷಣವೂ ನೀರಿನ ಮಟ್ಟ ಏರಿಕೆಯಿಂದ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ನಲ್ಲಿ, ಕೃಷ್ಣಾ ನದಿಯಲ್ಲಿ 71333 ಕ್ಯೂಸೆಕ್ ಒಳಹರಿವು ಹೆಚ್ಚಿದೆ. ಹಿಪ್ಪರಗಿ ಬ್ಯಾರೇಜ್ 82,300 ಕ್ಯೂಸೆಕ್ ಒಳಹರಿವು ಸದ್ಯಕ್ಕೆ ಇದೆ ಎಂದು ಚಿಕ್ಕೋಡಿ ಉಪವಿಭಾಗದ ಅಧಿಕಾರಿ ಮಾಧವಾ ಗೀತೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
Laxmi News 24×7