ಬೆಂಗಳೂರು: ಸಾರ್ವತ್ರಿಕ ವರ್ಗಾವಣೆ ಅವಧಿಯನ್ನು ಮತ್ತೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ. ಜುಲೈ 3ರ ವರೆಗೆ ವರ್ಗಾವಣೆ ಅವಧಿಯನ್ನು ಸರ್ಕಾರ ವಿಸ್ತರಿಸಿದೆ.
2023-24ನೇ ಸಾಲಿನ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಅವಧಿಯನ್ನು ಮೂರನೇ ಬಾರಿಗೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ.
ಈ ಮೊದಲು 2023-24ನೇ ಸಾಲಿನ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗಳನ್ನು ಜೂನ್ 15ರವರೆಗೆ ಕೈಗೊಳ್ಳಲು ಆದೇಶಿಸಲಾಗಿತ್ತು. ಬಳಿಕ ಜೂನ್ 30ರವರೆಗೆ ಸಾರ್ವತ್ರಿಕ ವರ್ಗಾವಣೆ ವಿಸ್ತರಿಸಿ ಆದೇಶ ಹೊರಡಿಸಲಾಗಿತ್ತು. ಇದೀಗ ಸಾರ್ವತ್ರಿಕ ವರ್ಗಾವಣೆ ಅವಧಿಯನ್ನು ಮತ್ತೆ ವಿಸ್ತರಿಸುವುದು ಅವಶ್ಯವೆಂದು ಪರಿಗಣಿಸಿ ಸರ್ಕಾರ ಈಗ ಮೂರನೇ ಬಾರಿಗೆ ವಿಸ್ತರಣೆಯ ಆದೇಶ ಹೊರಡಿಸಿದೆ.
2023-24ನೇ ಸಾಲಿಗೆ ಗ್ರೂಪ್ ಎ, ಗ್ರೂಪ್-ಬಿ, ಗ್ರೂಪ್-ಸಿ ಮತ್ತು ಗ್ರೂಪ್-ಡಿ ವರ್ಗದ ಅಧಿಕಾರಿ, ನೌಕರರಿಗೆ ಅನ್ವಯವಾಗುವಂತೆ ವರ್ಗಾವಣೆ ಮಾರ್ಗಸೂಚಿ ಹೊರಡಿಸಲಾಗಿತ್ತು. ಸರ್ಕಾರಿ ನೌಕರರ ವರ್ಗಾವಣೆ ಕುರಿತಂತೆ ವಿಸ್ಕೃತವಾದ ಮಾರ್ಗಸೂಚಿಗಳನ್ನು ನೀಡಲಾಗಿದೆ. ಈ ಮಾರ್ಗಸೂಚಿಗಳ ಪ್ರಕಾರ ಸರ್ಕಾರಿ ನೌಕರರ ವರ್ಗಾವಣೆಗಳನ್ನು ಪ್ರತಿ ವರ್ಷ ಮೇ ಮತ್ತು ಜೂನ್ ತಿಂಗಳುಗಳಲ್ಲಿ ಮಾತ್ರ ಮಾರ್ಗಸೂಚಿಗಳಲ್ಲಿರುವ ಷರತ್ತುಗಳಿಗೊಳಪಟ್ಟು ಮಾಡಬಹುದಾಗಿದೆ. ಒಂದು ಜೇಷ್ಠತಾ ಘಟಕದಲ್ಲಿ ಕಾರ್ಯನಿರತ ವೃಂದ ಬಲದ ಶೇ.6ರನ್ನು ಮೀರದಂತೆ ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಆಯಾ ಇಲಾಖಾ ಸಚಿವರಿಗೆ ಅಧಿಕಾರ ನೀಡಲಾಗಿದೆ ಎಂದು ಆದೇಶ ಪ್ರತಿಯಲ್ಲಿ ಸೂಚಿಸಲಾಗಿದೆ.
Laxmi News 24×7