ಚಿಕ್ಕೋಡಿ (ಬೆಳಗಾವಿ): ಆಧುನಿಕತೆ ಎಷ್ಟೇ ಬೆಳೆದರೂ ಇನ್ನೂ ಕೂಡ ಗ್ರಾಮೀಣ ಭಾಗದಲ್ಲಿ ಜಾತ್ರೆ ಹಬ್ಬ ಹರಿದಿನಗಳನ್ನು ಗ್ರಾಮಸ್ಥರು ಒಟ್ಟಾಗಿ ಸೇರಿ ಆಚರಿಸಿ ಸಂಭ್ರಮಿಸುವ ಪದ್ಧತಿ ಇದೆ.
ಇಂದು ಶಿರಹಟ್ಟಿ ಗ್ರಾಮದಲ್ಲಿ ಕಣ್ಮನ ಸೆಳೆಯುವ ಹನುಮಾನ್ ಓಕುಳಿ ನಡೆಯಿತು. ಗ್ರಾಮಸ್ಥರೆಲ್ಲ ಸೇರಿ ಆಚರಿಸಿ ಖುಷಿಪಟ್ಟರು.
ಒಂದೆಡೆ ಡಿಜೆ ಶಬ್ದಕ್ಕೆ ಹೆಜ್ಜೆ ಹಾಕುತ್ತಿರುವ ಯುವಕರಾದರೆ, ಮತ್ತೊಂದೆಡೆ ಗ್ರಾಮದ ಹಿರಿಯರು ಓಕುಳಿ ಕಂಬಕ್ಕೆ ಪೂಜೆ ಸಲ್ಲಿಸುತ್ತಿರುವ ದೃಶ್ಯ ಕಂಡುಬಂತು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದಲ್ಲಿ ಹಬ್ಬದ ಆಕರ್ಷಣೆ, ಉತ್ಸಾಹವಿತ್ತು. ಪ್ರತಿ ವರ್ಷದ ವಾಡಿಕೆಯಂತೆ ಈ ವರ್ಷವೂ ಗ್ರಾಮ ದೇವತೆ ಪವನಸುತ ಆಂಜನೇಯನ ಜಾತ್ರೆಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ಯುವಕರು, ಗ್ರಾಮದ ಹಿರಿಯರು ಓಕುಳಿಯಾಡುವ ಮುಖಾಂತರ ಆಚರಿಸಿದರು. ಹಿರಿಯರು ನಿರ್ಧರಿಸಿರುವ ದಿನಾಂಕದಂದು ನಾಲ್ಕು ದಿನಗಳವರೆಗೆ ಓಕುಳಿ ಹಬ್ಬ ಆಚರಣೆ ಮಾಡಲಾಗುತ್ತದೆ. ಮೊದಲನೇ ದಿನ ಹೊಂಡ ತೆಗೆಯುವುದು, ಎರಡನೇ ದಿನ ಹೊಂಡಕ್ಕೆ ನೀರು ಹಾಕುವುದು, ಮೂರನೇ ದಿನ ನಿರು ಓಕುಳಿ, ನಾಲ್ಕನೇ ದಿನ ಹಾಲು ಓಕುಳಿ ಎಂದು ಗ್ರಾಮದಲ್ಲಿ ನಾಲ್ಕು ದಿನವೂ ಹಬ್ಬದ ವಾತಾವರಣ ಕಳೆಗಟ್ಟುತ್ತದೆ.
ನಾಲ್ಕನೇ ದಿನ ಹಾಲು ಓಕುಳಿ ಹಬ್ಬ ಎಲ್ಲರ ಕಣ್ಮನ ಸೆಳೆಯುತ್ತದೆ. ಹನುಮದೇವರ ಎದುರು 50 ಅಡಿಗೂ ಹೆಚ್ಚು ಉದ್ದದ ಬೃಹತ್ ಆಕಾರದ ಓಕುಳಿ ಕಂಬವನ್ನು ನೆಟ್ಟು ಅದರ ಮೇಲಿಂದ ಅರ್ಚಕ ಹಾಲು ಮತ್ತು ತುಪ್ಪ ಸುರಿಯುತ್ತಾರೆ. ಗ್ರಾಮದ ಯುವಕರು ಎರಡು ತಂಡಗಳಾಗಿ ಆಡುತ್ತಾರೆ. ಮೊದಲು ಯಾವ ತಂಡ ಓಕುಳಿ ಕಂಬ ಹತ್ತುತ್ತದೋ ಅವರು ವಿಜಯಶಾಲಿ ಎಂದು ಊರ ಹಿರಿಯರು ಘೋಷಿಸಿ ಬಳಿಕ ಸನ್ಮಾನ ಮಾಡುವುದುಂಟು.
ಓಕುಳಿ ಕಂಬ ಹತ್ತೋದು ಅಷ್ಟೇನೂ ಸಲೀಸಾದ ಮಾತಲ್ಲ, ಓಕುಳಿ ಕಂಬ ಹತ್ತುವುದಕ್ಕೆ ಆಂಜನೇಯನ ರೀತಿಯಲ್ಲಿ ಬುದ್ಧಿಶಕ್ತಿ, ಚಾತುರ್ಯತೆ ಬೇಕು. ಹೀಗಿದ್ದವರು ಮಾತ್ರ ಕಂಬ ಹತ್ತುತ್ತಾರೆ ಎಂಬ ಮಾತು ಗ್ರಾಮದಲ್ಲಿ ಪ್ರಚಲಿತ. ಈ ವರ್ಷದ ಓಕುಳಿ ಹಬ್ಬದಲ್ಲಿ ಗ್ರಾಮದ ನೂರಾರು ಯುವಕರ ಪೈಕಿ ಅಭಿಷೇಕ್ ತುಬಚಿ ಎಂಬವರು ಓಕುಳಿ ಕಂಬ ಹತ್ತುವುದರಲ್ಲಿ ಯಶಸ್ವಿಯಾದರು.
ಓಕುಳಿ ಕಂಬ ಏರಲು ಹರಸಾಹಸ: ಅಂದಾಜು 50 ಅಡಿ ಎತ್ತರದ ಕಂಬವನ್ನು ಏರಲು ಹರಸಾಹಸ ಪಡುತ್ತಿದ್ದ ತಂಡಕ್ಕೆ ಮತ್ತೊಂದು ತಂಡದ ಯುವಕರು ನೀರು ಎರಚುವ ಮೂಲಕ ಕೆಳಗಡೆ ಇಳಿಸುವ ದೃಶ್ಯ ವಿಶೇಷವಾಗಿತ್ತು. ನೀರು ಎರಚುವ ತಂಡವನ್ನು ಲೆಕ್ಕಿಸದೇ ತಂಡ ಕಂಬ ಹತ್ತುವಲ್ಲಿ ಯಶಸ್ವಿಯಾಗಿ ನಾಲ್ಕು ದಿನದ ಜಾತ್ರೆ ಸಂಪನ್ನವಾಗುತ್ತದೆ. ಒಟ್ಟಾರೆಯಾಗಿ ಇನ್ನೂ ಗ್ರಾಮೀಣ ಪ್ರದೇಶದಲ್ಲಿ ಯುವ ಪೀಳಿಗೆಯ ಜನರು ಹಬ್ಬ, ಹರಿದಿನ ಹಾಗು ಜಾತ್ರೆಗಳನ್ನು ಒಗ್ಗಟ್ಟಿನಿಂದ ಸೇರಿಕೊಂಜು ಸಂಭ್ರಮದಿಂದ ಮುಂದುವರಿಸಿಕೊಂಡು ಹೋಗುತ್ತಿರುವುದು ವಿಶೇಷವಾಗಿದೆ.