ಬೆಂಗಳೂರು: ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಸ್ವಲ್ಪ ತಗ್ಗಿದರೂ ನೆರೆ ಮಾತ್ರ ತಗ್ಗಿಲ್ಲ. ಇನ್ನೂ ಹಲವು ಜನ ಮನೆಗೆ ತೆರಳಲಾಗದೆ ಕಾಳಜಿ ಕೇಂದ್ರಗಳಲ್ಲೇ ಕಾಲ ಕಳೆಯುತ್ತಿದ್ದಾರೆ. ಇತ್ತ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಲೇ ಇದ್ದು, ಇನ್ನಷ್ಟು ಗ್ರಾಮಗಳಿಗೆ ಪ್ರವಾಹದ ಭೀತಿ ಎದುರಾಗುತ್ತಿದೆ. ಹಲವು ರಸ್ತೆಗಳ ಸಂಪರ್ಕ ಕಡಿತವಾಗಿದೆ.
ಭೀಮಾ ನದಿಯ ಮಹಾ ಪ್ರವಾಹಕ್ಕೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಜೋಳದಡಗಿ ಬ್ರಿಡ್ಜ್ ಕಂ ಬ್ಯಾರೇಜ್ ಸಂಪೂರ್ಣ ಮುಳುಗಡೆಯಾಗಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಅಪಾಯ ಮಟ್ಟ ಮೀರಿ ಬ್ರಿಡ್ಜ್ ಮೇಲೆ ನೀರು ಹರಿಯುತ್ತಿರುವ ಹಿನ್ನೆಲೆ ವಡಗೇರಾ ಮೂಲಕ ರಾಯಚೂರು ಮತ್ತು ಯಾದಗಿರಿ ಸಂಪರ್ಕ ಬಂದ್ ಆಗಿದೆ. ಅವೈಜ್ಞಾನಿಕವಾಗಿ ಬ್ರಿಡ್ಜ್ ನಿರ್ಮಾಣ ಹಿನ್ನೆಲೆ ಇದರ ಅಕ್ಕ ಪಕ್ಕದ ಜೋಳದಡಗಿ, ಶಿವನೂರು, ಕೊಂಗಂಡಿ, ಗೋನಾಲಕ್ಕೆ ಪ್ರತಿ ವರ್ಷ ಪ್ರವಾಹದ ಆತಂಕ ಉಂಟಾಗುತ್ತಿದೆ.
ರಾಯಚೂರು ಜಿಲ್ಲೆಯಲ್ಲಿ ಕೃಷ್ಣಾ ನದಿ ರೌದ್ರ ನರ್ತನ ತಾಳಿದ್ದು, ಹಲವು ಗ್ರಾಮಗಳು ಮುಳುಗಡೆಯಾಗಿವೆ. ಭೀಮಾ ನದಿಯಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಡುತ್ತಿರುವುದರಿಂದ ರಾಯಚೂರಿನ ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ನದಿ ಪಾತ್ರದ ಬುರ್ದಿಪಾಡ ಗ್ರಾಮದಲ್ಲಿ 10 ಮನೆಗಳು ಸ್ಥಳಾಂತರವಾಗದೆ ಉಳಿದಿದ್ದು ಮುಳುಗಡೆ ಭೀತಿ ಎದುರಿಸುತ್ತಿವೆ. ಅಲ್ಲದೆ ಕೃಷ್ಣಾ ನದಿಯ ನಡುಗಡ್ಡೆ ಗ್ರಾಮಗಳು ಸಂಪೂರ್ಣವಾಗಿ ಹೊರ ಜಗತ್ತಿನ ಸಂಪರ್ಕವನ್ನು ಕಳೆದುಕೊಂಡಿವೆ. ಕಲಬುರ್ಗಿಯ ಸೊನ್ನ ಬ್ಯಾರೇಜ್‍ನಿಂದ 8 ಲಕ್ಷ ಕ್ಯೂಸೆಕ್ ನೀರು ಹರಿಸಿರುವುದರಿಂದ ಕೃಷ್ಣ ನದಿ ಪಾತ್ರದ 17 ಗ್ರಾಮಗಳ ಜನ ಆತಂಕದಲ್ಲಿದ್ದಾರೆ.
ಸನ್ನತಿ ಬ್ಯಾರೇಜ್ ನಿಂದ ಭೀಮಾ ನದಿಗೆ 3 ಲಕ್ಷ ಕ್ಯೂಸೆಕ್ ನೀರು ಬಿಡುಲಾಗಿದೆ. ಅಲ್ಲದೆ ಬಸವಸಾಗರ ಜಲಾಶಯದಿಂದ 1.23 ಕ್ಯೂಸೆಕ್ ನೀರು ಹರಿಸಲಾಗಿದೆ. ಇದರಿಂದಾಗಿ ಭೀಮಾ ನದಿಯ ಒಳ ಹರಿವು ಹೆಚ್ಚಳವಾಗುವ ಸಾಧ್ಯತೆ ಇದೆ. ಭೀಮಾ ನದಿಯಲ್ಲಿ ನೀರು ಹೆಚ್ಚಾಗುತ್ತಿದ್ದಂತೆ ಸೊನ್ನ ಬ್ಯಾರೇಜಿನಿಂದ 8 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿದೆ. ಈ ನೀರು ಇಂದು ರಾಯಚೂರು ತಾಲೂಕಿಗೆ ಬರಲಿದ್ದು, ಕೃಷ್ಣಾ ನದಿ ಪ್ರವಾಹ ಇನ್ನೂ ಹೆಚ್ಚಳವಾಗಲಿದೆ.
ಜಿಲ್ಲಾಡಳಿತ ಭಾರೀ ಪ್ರವಾಹದ ಮುನ್ಸೂಚನೆ ನೀಡಿದ್ದು, ಪ್ರವಾಹ ಎದುರಿಸಲು ಸಿದ್ಧತೆ ನಡೆಸಿದೆ. ರಾಯಚೂರು ತಾಲೂಕಿನ ಗುರ್ಜಾಪುರ, ಬೂರ್ದಿಪಾಡ ಹಾಗೂ ಡಿ ರಾಂಪುರ ಸ್ಥಳಾಂತರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಯಚೂರು ತಾಲೂಕಿನ 17 ಗ್ರಾಮಗಳಲ್ಲಿ ಕಟ್ಟೆಚ್ಚೆರ ವಹಿಸಲಾಗಿದೆ. ಒಂದು ಎನ್‍ಡಿಆರ್‍ಎಫ್ ತಂಡ ರಾಯಚೂರಿನಲ್ಲಿ ಬೀಡು ಬಿಟ್ಟಿದೆ.