ಬೆಂಗಳೂರು, ಅ.12- ಖುಷ್ಬೂ ಅವರು ಕಾಂಗ್ರೆಸ್ ಪಕ್ಷ ತೊರೆದಿರುವುದು ತಮಿಳುನಾಡು ರಾಜಕೀಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಎಐಸಿಸಿ ಉಸ್ತುವಾರಿ ದಿನೇಶ್ ಗುಂಡೂರಾವ್ ಅಭಿಪ್ರಾಯ ಪಟ್ಟಿದ್ದಾರೆ.
ಕಳೆದ ಒಂದು ವಾರದ ಹಿಂದೆಯಷ್ಟೇ ಬಿಜೆಪಿ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದ ಖುಷ್ಬೂ ಇದೀಗ ಅದೇ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಮುಂದಾಗುವ ಮೂಲಕ ಕಾಂಗ್ರೆಸ್ ಮುಖಂಡರ ವಿರುದ್ಧ ಮಾಡುತ್ತಿರುವ ಆರೋಪಗಳನ್ನು ನೋಡಿದರೆ ಅವರಿಗೆ ಸೈದ್ಧಾಂತಿಕ ಸಿದ್ಧಾಂತವಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದಾರೆ.
ತತ್ವ ಸಿದ್ಧಾಂತಕ್ಕೆ ವಿರುದ್ಧವಾಗಿ ಜೆ.ಪಿ.ನಡ್ಡಾ ಅವರ ಮೂಲಕ ಬಿಜೆಪಿ ಪಕ್ಷಕ್ಕೆ ಖುಷ್ಬೂ ಸೇರ್ಪಡೆಗೊಳ್ಳುತ್ತಿರುವುದು ದುರಂತವೇ ಸರಿ. ಅವರು ಪಕ್ಷ ತ್ಯಜಿಸುವುದರಿಂದ ತಮಿಳುನಾಡು ರಾಜಕೀಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆ ವೇಳೆಗೆ ಕಾಂಗ್ರೆಸ್ ಪಕ್ಷವನ್ನು ಬಲವರ್ಧನೆಗೊಳಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಮಿಳುನಾಡು ಉಸ್ತುವಾರಿಯಾಗಿರುವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.ಖುಷ್ಬೂ ಸೇರ್ಪಡೆಯಿಂದ ಬಿಜೆಪಿ ಪಕ್ಷ ತಮಿಳುನಾಡಿನಲ್ಲಿ ಯಾವ ಸಾಧನೆ ಮಾಡಲು ಸಾಧ್ಯವಿಲ್ಲ.ಖುಷ್ಬೂ ಕೆಲವು ಕಾರಣಾಂತರಗಳಿಂದ ಆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಯಾವುದೇ ರಾಜಕೀಯ ಉದ್ದೇಶವಿಲ್ಲ. ಆದರೆ ಅವರು ಯಾವ ಕಾರಣಕ್ಕೆ ಸೇರ್ಪಡೆಗೊಂಡಿದ್ದಾರೆ ಎಂಬುದನ್ನು ದಿನೇಶ್‍ಗುಂಡೂರಾವ್ ಪ್ರಶ್ನಿಸಿದ್ದಾರೆ.