ಬೆಳಗಾವಿ: ‘ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್‌ನಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿ ದಂಡದ ಮೊತ್ತ ಪಾವತಿಸಲು ಫೆ.11ರವರೆಗೆ ಶೇ 50ರಷ್ಟು ರಿಯಾಯಿತಿ ನೀಡಲಾಗಿದೆ. ವಾಹನ ಸವಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮುಸ್ತಫಾ ಹುಸೇನ್ ಎಸ್.ಎ.
ಹೇಳಿದರು.
ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ 6.28 ಲಕ್ಷ ಪ್ರಕರಣಗಳಲ್ಲಿ ₹26 ಕೋಟಿ ದಂಡ ಪಾವತಿಯಾಗಬೇಕಿದೆ. ವಾಹನ ಸವಾರರು ತಮಗೆ ವಿಧಿಸಿದ ದಂಡದ ಮೊತ್ತದಲ್ಲಿ ಶೇ 50ರಷ್ಟು ಪಾವತಿಸಬೇಕು’
ಎಂದರು.
‘ಫೆ.11ರಂದು ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ. ಕಳೆದ ಬಾರಿ ಲೋಕ ಅದಾಲತ್‌ನಲ್ಲಿ ಬೆಳಗಾವಿಯಲ್ಲಿ 14 ಸಾವಿರ ಪ್ರಕರಣ ಇತ್ಯರ್ಥ
ಗೊಳಿಸಿದ್ದೆವು. ಈ ಬಾರಿ ಹೆಚ್ಚಿನ ಪ್ರಕರಣಗಳ ಇತ್ಯರ್ಥಕ್ಕೆ ಯೋಜನೆ ರೂಪಿಸಲಾಗಿದೆ’ ಎಂದು ಹೇಳಿದರು.
‘ರಾಜ್ಯದಲ್ಲಿ ಟ್ರಾಫಿಕ್ ಪ್ರಕರಣಗಳ ದಂಡ ವಸೂಲಿ ಶುಕ್ರವಾರ ಹಾಗೂ ಶನಿವಾರ ಸುಮಾರು ₹5.5 ಕೋಟಿ ಆಗಿದೆ. ದಿನದಿಂದ ದಿನಕ್ಕೆ ದಂಡ ಹೆಚ್ಚುವುದು ಒಳ್ಳೆಯ ಬೆಳವಣಿಗೆ ಅಲ್ಲ. ಸಾರ್ವಜನಿಕರಿಗೆ ಈಗಾಗಲೇ ದಂಡ ರಿಯಾಯಿತಿ ಕುರಿತು ಮಾಹಿತಿ ನೀಡಲಾಗಿದೆ. ಫೆ.11ರಂದು ಈ ರಿಯಾಯಿತಿ ಅವಧಿ ಮುಕ್ತಾಯ ಆಗಲಿದೆ’ ಎಂದರು.
ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಮಾತನಾಡಿ, ‘ಕಳೆದ ಮೂರು ವರ್ಷಗಳಿಂದ ಈ ಪ್ರಕರಣ ಬಾಕಿ ಉಳಿದಿವೆ. ‘ಬೆಳಗಾವಿ ಒನ್’ ಸೆಂಟರ್ ಹಾಗೂ ದಕ್ಷಿಣ ಸಂಚಾರ ಠಾಣೆಯ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೆಂಟರ್‌ನಲ್ಲಿ ಕೂಡ ಆನ್‌ಲೈನ್ ಮೂಲಕ ದಂಡ ಪಾವತಿಸಲು ಅವಕಾಶವಿದೆ’ ಎಂದು ತಿಳಿಸಿದರು.
‘ಟ್ರಾಫಿಕ್ ಸಿಗ್ನಲ್ ನಿಯಮ ಉಲ್ಲಂಘನೆ, ಹೆಲ್ಮೆಟ್ ಹಾಕದೇ ವಾಹನ ಓಡಿಸುವುದಕ್ಕೆ ಸಂಬಂಧಿಸಿದಂತೆ ಯಾವುದೇ ‘ಮ್ಯಾನ್ಯುವಲ್’ ಪ್ರಕರಣಗಳು ಬಾಕಿ ಇಲ್ಲ. ಸ್ಥಳದಲ್ಲೇ ದಂಡ ವಿಧಿಸಲಾಗುತ್ತಿದೆ. ಹಾಗಾಗಿ ವಾಹನ ಸವಾರರಿಂದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಕಡಿಮೆ ಆಗಿವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಹೇಳಿದರು.
ಹಿರಿಯ ದಿವಾಣಿ ನ್ಯಾಯಾಧೀಶರಾದ ಪಿ.ಮುರಳಿಮೋಹನ ರೆಡ್ಡಿ, ಅಪರಾಧ ವಿಭಾಗದ ಡಿಸಿಪಿ ಪಿ.ವಿ.ಸ್ನೇಹಾ ಇತರರಿದ್ದರು.