ಬೆಳಗಾವಿ: ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಮತ್ತೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಮಾಡಿದ್ದಾರೆ. ಈ ಉಭಯ ನಾಯಕರ ಭೇಟಿ ಅಚ್ಚರಿಗೆ ಕಾರಣವಾಗಿದ್ದು, ಮಹಾರಾಷ್ಟ್ರದಲ್ಲಿಯೂ ಆಪರೇಷನ್ ಕಮಲಕ್ಕೆ ಕಸರತ್ತು ನಡೆದಿದೆಯಾ? ಎಂಬ ಕುತೂಹಲ ಕೆರಳಿಸಿದೆ.
ಕಳೆದ ತಿಂಗಳಷ್ಟೇ ಫಡ್ನವಿಸ್ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿ ಬಂದಿದ್ದ ರಮೇಶ ಜಾರಕಿಹೊಳಿ, ಕೋವಿಡ್ ಹಾವಳಿ, ಲಾಕ್ ಡೌನ್ ನಿಂದಾಗಿ ಸಚಿವ ಸ್ಥಾನ ದೊರೆತ ಬಳಿಕ ಫಡ್ನವಿಸ್ ಅವರಿಗೆ ಅಭಿನಂದನೆ ಸಲ್ಲಿಸಲು ಆಗಿರಲಿಲ್ಲ. ಈ ಹೀಗಾಗಿ ಮೊನ್ನೆ ಭೇಟಿ ನೀಡಿ ಅಭಿನಂದನೆ ಸಲ್ಲಿಸಿ ಬಂದಿದ್ದೇನೆ. ಇದೊಂದು ಸೌಹಾರ್ದಯುತ ಭೇಟಿಯಾಗಿದ್ದು, ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದಿದ್ದರು.
ಸದ್ಯ ಮತ್ತೆ ಉಭಯ ನಾಯಕರು ಭೇಟಿಯಾಗಿದ್ದು, ಮಹಾರಾಷ್ಟ್ರದಲ್ಲಿಯೂ ಆಪರೇಷನ್ ಕಮಲಕ್ಕೆ ಚಟುವಟಿಕೆ ಆರಂಭವಾಗಿವೆ ಎಂಬ ಗುಸುಗುಸು ಹಬ್ಬಿದೆ. ಮಧ್ಯಪ್ರದೇಶದಲ್ಲಿಯೂ ಕಾಂಗ್ರೆಸ್ ಸರ್ಕಾರ ಬೀಳಿಸಲು ಮುಂದಾಗಿದ್ದ ಬಿಜೆಪಿಗೆ ತೀವ್ರ ಮುಖಭಂಗವಾಗಿದ್ದು, ಮಹಾರಾಷ್ಟ್ರದ ಮಹಾ ವಿಕಾಸ ಆಘಾಡಿ ಸರ್ಕಾರದ ಮುಂದೆ ಸಾಹುಕಾರನ ಆಟ ನಡೆಯುತ್ತಾ ಎಂಬುವುದು ಕಾದು ನೋಡಬೇಕಿದೆ.
ಇಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರೇ ಮಹಾರಾಷ್ಟ್ರದಲ್ಲಿ ಬಹು ಬೇಗ ಬಿಜೆಪಿ ಸರ್ಕಾರ ಬರಲಿದೆ ಎಂದಿದ್ದು, ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ.
2014 ರಲ್ಲಿ ನಡೆದ ಮಹಾರಾಷ್ಟ್ರದ 13 ನೇ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದ ಬಿಜೆಪಿ. ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಅವರು ಐದು ವರ್ಷ ಪೈರೈಸಿದ್ದರು. 2019 ರಲ್ಲಿ ನಡೆದ 14 ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ, ಶಿವಸೇನೆ ಯಾವ ಪಕ್ಷಕ್ಕೂ ಬಹುಮತ ಬರದೆ ಸರ್ಕಾರ ರಚನೆಗೆ ಕಂಗಟ್ಟಾಗಿತ್ತು. ಕೊನೆಗೆ ಶಿವಸೇನೆ, ಕಾಂಗ್ರೆಸ್ ಹಾಗೂ ಎನ್ ಸಿಪಿ ಮೈತ್ರಿ “ಮಹಾ ವಿಕಾಸ ಆಘಾಡಿ” ಮೂಲಕ ಉದ್ಧವ ಠಾಕ್ರೆ ಅವರು 14 ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದಾರೆ.