2024ರ ಲೋಕಸಭಾ ಚುನಾವಣೆಗೆ 2 ವರ್ಷಗಳಷ್ಟೇ ಬಾಕಿ ಇದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರತಿಸ್ಪರ್ಧಿ ಯಾರಾಗಲಿದ್ದಾರೆ ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ. ಬಿಹಾರದಲ್ಲಿ ಎನ್‌ಡಿಎ ಮೈತ್ರಿ ಕಡಿದುಕೊಂಡ ಬಳಿಕ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಹೆಸರೇ ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ.
ಇದನ್ನು ಆರ್‌ಜೆಡಿಯ ತೇಜಸ್ವಿ ಯಾದವ್ ಈಚೆಗೆ ಅನುಮೋದಿಸಿದ್ದರು. ಇನ್ನು, ದೆಹಲಿ ಸಿಎಂ ಕೇಜ್ರಿವಾಲ್ ಮುಂದಿನ ಪಿಎಂಬ ಅಭ್ಯರ್ಥಿ ಎಂದು ಅಲ್ಲಿನ ಉಪಮುಖ್ಯಮಂತ್ರಿ ಸಿಸೊಡಿಯಾ ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ. ಇದಲ್ಲದೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರೂ ಮೋದಿಗೆ ಸವಾ ಲೊಡ್ಡುವಂಥವರೆಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಇನ್ನು, ಕೆ.ಚಂದ್ರಶೇಖರ್ ರಾವ್, ಅಖೀಲೇಶ್, ಶರದ್ ಪವಾರ್ ಹೆಸರೂ ಆಗೊಮ್ಮೆ ಈಗೊಮ್ಮೆ ಚಾಲ್ತಿಗೆ ಬರು ತ್ತಿದೆ. ಈ ಎಲ್ಲ ನಾಯಕರ ಸಾಮರ್ಥ್ಯ, ದೌರ್ಬಲ್ಯಗಳೇನು ನೋಡೋಣ.
ನಿತೀಶ್‌ಕುಮಾರ್
ಸಾಮರ್ಥ್ಯ
ಹಿಂದಿ ಭಾಷಿಕ ರಾಜ್ಯಗಳ ಪೈಕಿ ಪ್ರಮುಖ ರಾಜ್ಯದ ನಾಯಕರಾಗಿರುವುದು, ವಾಜಪೇಯಿ ಸರಕಾರದಲ್ಲಿ ಕೇಂದ್ರ ಸಚಿವರು ಹಾಗೂ 8 ಬಾರಿ ಮುಖ್ಯಮಂತ್ರಿಯಾಗಿ ದೀರ್ಘಾವಧಿ ಆಡಳಿತದ ಅನುಭವ, ಹಿಂದುಳಿದ ವರ್ಗದ ನಾಯಕನೆಂಬ ಹಣೆಪಟ್ಟಿ, ಭ್ರಷ್ಟಾಚಾರದ ಆರೋಪವಿ ಲ್ಲದೇ ಕ್ಲೀನ್ ಇಮೇಜ್, ವಂಶವಾಹಿ ರಾಜಕಾರಣಕ್ಕೆ ಅವಕಾಶ ನೀಡದಿರು ವುದು. ಸೌಮ್ಯ ಸ್ವಭಾವದವರಾದ ಕಾರಣ ಫಲಿತಾಂಶ ಅತಂತ್ರವಾದರೂ ಹತ್ತಾರು ಪಕ್ಷಗಳ ಬೆಂಬಲ ಪಡೆದು ಅಧಿಕಾರಕ್ಕೇರುವ ಜಾಣ್ಮೆ, ತಾಳ್ಮೆ ಇದೆ.
ದೌರ್ಬಲ್ಯ
ಬಿಜೆಪಿ, ಆರ್‌ಜೆಡಿ, ಕಾಂಗ್ರೆಸ್ ಸೇರಿ ಯಾವುದೇ ಪಕ್ಷಗಳ ಜತೆ ಸ್ಥಿರವಾದ ಮೈತ್ರಿ ಕಾಪಾಡಿಕೊಳ್ಳಲು ವಿಫಲ, ತಮ್ಮ ವರ್ಚಸ್ಸು ಮತ್ತು ಪಕ್ಷದ ಅಸ್ತಿತ್ವದ ನೆಪ ಮುಂದಿಟ್ಟುಕೊಂಡು ಅನುಕೂಲಕ್ಕೆ ತಕ್ಕಂತೆ ಮೈತ್ರಿಗೆ ಕೈ ಕೊಡುವ ಅವಕಾಶ ವಾದಿ ರಾಜಕಾರಣಿ ಎಂಬ ಹಣೆಪಟ್ಟಿ. ಬಿಹಾರದಲ್ಲಿ ಮಾತ್ರ ಜನಪ್ರಿಯತೆ. ದೇಶದ ಉದ್ದಗಲಕ್ಕೂ ಜನರನ್ನು ಆಕರ್ಷಿಸಬಲ್ಲ ಮಾಸ್ ಲೀಡರ್ ಅಲ್ಲ, ಆರ್ಥಿಕ ವಿಷಯಗಳಿಗೆ ಸಂಬಂಧಿಸಿ ಸ್ಪಷ್ಟ ದೃಷ್ಟಿಕೋನ ಇಲ್ಲದಿರುವುದು, ಯುವಕರನ್ನು ಆಕರ್ಷಿಸುವಲ್ಲಿ ವಿಫಲ.
ಮಮತಾ ಬ್ಯಾನರ್ಜಿ
ಸಾಮರ್ಥ್ಯ
ಪ್ರಸ್ತುತ ದೇಶದಲ್ಲಿರುವ ಏಕೈಕ ಮಹಿಳಾ ಸಿಎಂ ಎಂಬ ಖ್ಯಾತಿ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಅವ ರದ್ದು. ಕೇಂದ್ರ ಸಚಿವೆ ಹಾಗೂ 2 ಬಾರಿ ಸಿಎಂ ಆಗಿ ದೀರ್ಘಾವಧಿ ಆಡಳಿತದ ಅನುಭವ, ಯುಪಿ, ಮಹಾರಾಷ್ಟ್ರ ನಂತರ ಬಂಗಾಳ ದಲ್ಲಿ ಅತೀ ಹೆಚ್ಚು 42 ಸಂಸತ್ ಸ್ಥಾನಗಳಿ ದ್ದು, ರಾಜ್ಯದಲ್ಲಿ ಮಮತಾ ಬಿಗಿ ಹಿಡಿತ ಹೊಂದಿರುವುದರಿಂದ ಅತ್ಯಧಿಕ ಸ್ಥಾನಗ ಳಲ್ಲಿ ಗೆಲುವು ಸಾಧಿಸಬಹುದು. ಬಡ ವರ್ಗದ ಮಾಸ್ ಲೀಡರ್ ಆಗಿರುವುದು, ಎದುರಾಳಿಗಳ ವಿರುದ್ಧ ಬೀದಿಗಿಳಿದು ಅಬ್ಬರಿಸುವ ಗಟ್ಟಿಗಿತ್ತಿ.
ದೌರ್ಬಲ್ಯ
ಎಷ್ಟು ದಿಟ್ಟೆಯೋ ಹಾಗೇ ಮುಂಗೋಪಿಯೂ ಹೌದು. ಇದಕ್ಕೆ ನಿದರ್ಶನ ಸಂಸತ್‌ನಲ್ಲಿ ಸ್ಪೀಕರ್ ಮೇಲೆ ಪೇಪರ್ ಎಸೆದಿದ್ದು. ಪಿಎಂ ಅಭ್ಯರ್ಥಿ ಎಂದು ಬಿಂಬಿಸಿ ಕೊಂಡರೂ ಬಹುತೇಕ ಪಕ್ಷಗಳು ದೀದಿ ಯನ್ನು ಬೆಂಬಲಿಸುವ ಸಾಧ್ಯತೆ ಕಡಿಮೆ. ಬೆಂಬಲಿಸಿದರೂ ಎಲ್ಲ ಪಕ್ಷಗಳನ್ನು ನಿಭಾ ಯಿಸುವಷ್ಟು ತಾಳ್ಮೆ ಇಲ್ಲ. ಇಂಗ್ಲಿಷ್, ಹಿಂದಿ ಮೇಲೆ ಹಿಡಿತ ಇಲ್ಲ, ಜನಪ್ರಿಯತೆ ಯಲ್ಲಿ ಬಂಗಾಳಕ್ಕೆ ಸೀಮಿತ. ಟಿಎಂಸಿ ಸಚಿವರ ಮೇಲೆ ಭ್ರಷ್ಟಾಚಾರದ ಆರೋ ಪಗಳು, ಕುಟುಂಬ ರಾಜಕಾರಣಕ್ಕೆ ನೀರೆರೆಯುತ್ತಿದ್ದಾರೆಂಬ ಅಪವಾದ.
ಅರವಿಂದ್ ಕೇಜ್ರಿವಾಲ್
ಸಾಮರ್ಥ್ಯ
ಹೊಸ ಪಕ್ಷಕಟ್ಟಿ ವೈಯಕ್ತಿಕ ವರ್ಚಸ್ಸು, ಆಶ್ವಾಸನೆ, ಬೇರೆ ವರಿಗಿಂತ ಭಿನ್ನ ಎಂದು ತೋರಿಸಿಕೊಂಡು ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾ ರಕ್ಕೆ ಬಂದ ಕೇಜ್ರಿವಾಲ್ “ದೆಹಲಿ ಮಾಡೆಲ್’ ಬಗ್ಗೆ ಪಸರಿಸುತ್ತಿ ದ್ದಾರೆ. ಮಧ್ಯಮ ವರ್ಗ ಹಾಗೂ ಗ್ರಾಮೀಣ ಯುವಕರನ್ನು ಆಕರ್ಷಿಸು ವಲ್ಲಿ ನಿಪುಣ, ಮಾಜಿ ಐಆರ್‌ಎಸ್ ಅಧಿಕಾರಿ ಆಗಿರುವುದರಿಂದ ಇಂಗ್ಲಿಷ್ ಮತ್ತು ಹಿಂದಿ ಭಾಷೆ ಮೇಲೆ ಪಾಂಡಿತ್ಯ. ದೇಶಾದ್ಯಂತ ಭ್ರಷ್ಟಾಚಾರರಹಿತ ಆಡಳಿತ ನೀಡುವ ಘೋಷಣೆ ಮೊಳಗಿಸಿ ಆಕರ್ಷಿಸಬಹುದು.
ದೌರ್ಬಲ್ಯ
ಆಪ್ ಪಕ್ಷ ಕೆಲವೇ ರಾಜ್ಯಗ ಳಿಗೆ ಸೀಮಿತವಾಗಿದ್ದು, ಎಲ್ಲ ರಾಜ್ಯಗಳಲ್ಲಿ ಕಾರ್ಯ ಕರ್ತರು, ಮುಖಂಡರ ಕೊರತೆ, ಸಂಘಟನೆ ಇಲ್ಲದಿ ರುವುದು. ವಿಪಕ್ಷದಲ್ಲಿರುವ ಹಲವು ನಾಯಕರೊಂದಿಗೆ ಮಾತ್ರ ರಾಜಕೀಯವಾಗಿ ಉತ್ತಮ ಬಾಂಧವ್ಯ ಹೊಂದಿರುವುದು, ಇತ್ತೀಚಿನ ದಿನಗಳಲ್ಲಿ ತಮ್ಮನ್ನು ಜಾತ್ಯತೀತ ನಾಯಕನೆಂದು ಗುರುತಿಸಿಕೊಳ್ಳುತ್ತಿರುವುದು ಮತ್ತೂಂದು ವರ್ಗದ ಅವಕೃಪೆಗೆ ಒಳ ಗಾಗಬಹುದು. ಫಲಿತಾಂಶ ಅತಂತ್ರವಾ ದರೂ ಕೇಜ್ರಿವಾಲ್‌ರನ್ನು ಬಹುತೇಕ ಪಕ್ಷಗಳು ಅಪ್ಪಿಕೊಳ್ಳುವ ಸಾಧ್ಯತೆ ಕಡಿಮೆ.
ರಾಹುಲ್ ಗಾಂಧಿ
ಸಾಮರ್ಥ್ಯ
ದೇಶದ ಅತಿ ದೊಡ್ಡ ಪಕ್ಷದ ನಾಯಕನೆಂಬ ಖ್ಯಾತಿ, ದೇಶದ ಉದ್ದಗಲಕ್ಕೂ ಕಾಂಗ್ರೆಸ್ ಹಾಗೂ ಗಾಂಧಿ ಕುಟುಂಬ ವರ್ಚಸ್ಸು ಹೊಂದಿರುವುದು, ತಳಮಟ್ಟದಿಂದಲೂ ಸಂಘಟನೆ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಿರುವುದು, ಎನ್‌ಡಿಎಗೆ ಬಹುಮತ ಬರದಿದ್ದರೆ ಯುಪಿಎ ಅಂಗಪಕ್ಷಗಳ ಜತೆಗೆ ಹಾಗೂ ಇನ್ನಿತರ ಪಕ್ಷಗಳ ಬೆಂಬಲ ಪಡೆದು ಪರ್ಯಾಯ ಸರಕಾರ ರಚಿಸುವ ಸಾಮರ್ಥ್ಯ.
ದೌರ್ಬಲ್ಯ
ವಂಶಾಡಳಿತ ರಾಜ ಕಾರಣದ ಕಳಂಕ, ಚುನಾ ವಣೆ ಸೇರಿದಂತೆ ಹಲವು ವಿಷಯಗಳಲ್ಲಿ ಬಿಜೆಪಿ ಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗದಿರುವುದು, ಯುಪಿಎ ಅಧಿಕಾರದಲ್ಲಿದ್ದಾಗಲೂ ಸರಕಾರದಲ್ಲಿ ಆಡಳಿತ ಜವಾಬ್ದಾರಿ ತೆಗೆದುಕೊಳ್ಳದಿರುವುದು, ತಮ್ಮ ಕಾರ್ಯಕ್ಷಮತೆ ಸಾಬೀತುಪಡಿಸಲು ವಿಫಲ, ರಾಜಕಾರಣದಲ್ಲಿ ರಾಹುಲ್ ಗಂಭೀರತೆ ಹೊಂದಿಲ್ಲ, 247 ರಾಜಕಾರಣಿಯಲ್ಲ, ಟೈಂಪಾಸ್ ರಾಜಕಾರಣಿ ಎಂಬ ಅಪವಾದ.
ಕೆ.ಚಂದ್ರಶೇಖರ್ ರಾವ್
ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಸಹ ಪ್ರಧಾನಿ ಅಭ್ಯರ್ಥಿಯಾಗುವ ನಿರೀಕ್ಷೆಯಲ್ಲಿದ್ದರೂ ಇವರನ್ನು ಬೆಂಬಲಿಸುವ ಪಕ್ಷಗಳು ವಿರಳ. ಕಾಂಗ್ರೆಸ್ ಜತೆ ಅಷ್ಟ ಕಷ್ಟೇ. ಟಿಡಿಪಿ, ವೈಎಸ್‌ಆರ್ ಕಾಂಗ್ರೆಸ್ ಬೆಂಬಲ ನಿರೀಕ್ಷಿಸುವಂತಿಲ್ಲ. ತೆಲಂಗಾಣ ದಲ್ಲಿ ಬಿಜೆಪಿ ದಿನದಿಂದ ದಿನಕ್ಕೆ ಭದ್ರವಾಗುತ್ತಿರುವುದು ಕೆಸಿಆರ್‌ರನ್ನು ಕಂಗೆಡಿಸಿದೆ. ರಾಜ್ಯದಲ್ಲಿ 17 ಸಂಸತ್ ಸ್ಥಾನಗಳಿದ್ದು, 2019ರ ಚುನಾವಣೆಯಲ್ಲಿ ಬಿಜೆಪಿ 4 ಸ್ಥಾನ ಗಳಿಸಿದ್ದರೆ, 24ರಲ್ಲಿ ಸ್ಥಾನ ಹೆಚ್ಚಿಸಿಕೊಳ್ಳಬಹುದು. ತೆಲಂಗಾಣ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಆಗದಿರುವುದು, ಸರಕಾರಕ್ಕೆ ಭ್ರಷ್ಟಾಚಾರ, ಕೆಸಿಆರ್‌ಗೆ ಕುಟುಂಬ ರಾಜಕಾ ರಣದ ಕಳಂಕ ಮೆತ್ತಿಕೊಂಡಿರುವುದು ನೆಗೆಟಿವ್ ಆಗಿ ಪರಿಣಮಿಸಬಹುದು.
ಅಖಿಲೇಶ್ ಯಾದವ್
ಉತ್ತರಪ್ರದೇಶದಲ್ಲಿ 80 ಸಂಸತ್ ಸ್ಥಾನ ಗಳಿದ್ದು, ನಿರ್ಣಾಯಕ ಪಾತ್ರ ವಹಿಸ ಲಿದೆ. ರಾಜ್ಯದಲ್ಲಿ ಎಸ್‌ಪಿ ಪ್ರಬಲವಾ ಗಿದ್ದು, ಮಾಜಿ ಸಿಎಂ ಅಖಿಲೇಶ್ ಯಾದವ್ ಸಹ ಪ್ರಧಾನಿ ಅಭ್ಯರ್ಥಿ ಎಂದು ತೋರ್ಪಡಿ ಸಿಕೊಳ್ಳು ತ್ತಿದ್ದಾರೆ. ಸತತ 2ನೇ ಬಾರಿ ಪೂರ್ಣ ಬಹುಮತದೊಂದಿಗೆ ಅಧಿಕಾ ರಕ್ಕೆ ಬಂದ ಬಿಜೆಪಿಯ ಫೈರ್‌ಬ್ರ್ಯಾಂಡ್ ಯೋಗಿ ಆದಿತ್ಯನಾಥರ ವಿರುದ್ಧ ತವರು ರಾಜ್ಯದಲ್ಲೇ ಹೆಚ್ಚು ಲೋಕಸಭಾ ಸ್ಥಾನ ಗಳಿಸುವ ಕನಸು ಭಗ್ನವಾದರೆ, ಪಿಎಂ ಅಭ್ಯರ್ಥಿ ಕನಸು ಸಹ ಛಿದ್ರವಾಗಲಿದೆ.
ಶರದ್ ಪವಾರ್
ಮಹಾರಾಷ್ಟ್ರ ಮಾಜಿ ಸಿಎಂ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ವಿಪಕ್ಷಗಳ ಪ್ರಧಾನಿ ಅಭ್ಯರ್ಥಿ ಆಗುವ ಸಂಭವ ಕಡಿಮೆ. 81 ವರ್ಷದ ಪವಾರ್ ಚುನಾ ವಣೆ ಹೊತ್ತಿಗೆ 83ನೇ ವರ್ಷಕ್ಕೆ ಕಾಲಿಡ ಲಿದ್ದಾರೆ. ಕಾಂಗ್ರೆಸ್ ಜತೆ ದೀರ್ಘಾವಧಿ ಮೈತ್ರಿ ಹೊಂದಿರುವ ಎನ್‌ಸಿಪಿ ಎಂತಹ ಸಂದರ್ಭದಲ್ಲೂ ಕಾಂಗ್ರೆಸ್‌ನಿಂದ ಬೇರ್ಪಡಲಿಕ್ಕಿಲ್ಲ. ಇಳಿ ವಯಸ್ಸಿನಲ್ಲಿ ಮಿತ್ರಪಕ್ಷದ ಜತೆ ಹೊಂದಿಕೊಂಡು ಹೋಗಲಿರುವ ಕಾರಣ ಪ್ರಧಾನಿ ಅಭ್ಯರ್ಥಿ ಆಗುವ ಸಾಧ್ಯತೆ ಕಡಿಮೆ.
ಬಿಜೆಪಿಯಲ್ಲಿ ಯಾರಿದ್ದಾರೆ?
ಬಿಜೆಪಿಯಲ್ಲಿ ಮೋದಿ ನಡೆದಿದ್ದೇ ದಾರಿ ಎಂಬಂತಾಗಿದ್ದು, ಇವರನ್ನು ದಾಟಿ ಹೋಗುವ ಮತ್ತೂಬ್ಬರು ಸದ್ಯಕ್ಕೆ ಪಕ್ಷದಲ್ಲಿ ಕಾಣುತ್ತಿಲ್ಲ. 24ರಲ್ಲಿಯೂ ಮೋದಿ ಅವರೇ ಪ್ರಧಾನಿ ಅಭ್ಯರ್ಥಿಯಾಗುವುದು ನಿಶ್ಚಿತ. 71 ವರ್ಷದ ಮೋದಿ ಅವರಿಗೆ 24ರ ಚುನಾವಣೆ ಹೊತ್ತಿಗೆ 73 ತುಂಬಿರುತ್ತದೆ. ತಾವೇ ರೂಪಿಸಿದ 75 ವರ್ಷವಾದವರಿಗೆ ಅಧಿಕಾರ, ಪಕ್ಷದಲ್ಲಿ ಪ್ರಮುಖ ಹುದ್ದೆ ಇಲ್ಲ ಎಂಬ ನೀತಿ ಮೋದಿ ಅವರಿಗೆ ಅನ್ವಯಿಸುವ ಸಾಧ್ಯತೆ ಕಡಿಮೆ. ಏಕೆಂದರೆ ಮೂರು ಬಾರಿ ಗೆಲುವಿನ ದಡ ಸೇರಿಸಿದ ವ್ಯಕ್ತಿಯನ್ನು ಮೂಲೆಗುಂಪು ಮಾಡುವುದು ಸುಲಭದ ಮಾತಲ್ಲ. ಇನ್ನು, ಚುನಾವಣೆಗೆ ಮುನ್ನ ಮಹಾ ಘಟಬಂಧನ್, ತೃತೀಯ ರಂಗಗಳನ್ನು ರಚಿಸಿಕೊಳ್ಳುವ ವಿಪಕ್ಷಗಳು ಚುನಾವಣೆ ಹತ್ತಿರವಾಗುತ್ತಿದ್ದಂತೆ ಸೌಹಾರ್ದ ಕೊರತೆ, ಸೀಟು ಹಂಚಿಕೆ, ಭಿನ್ನಮತ, ಅಸಮಾಧಾನ ಭುಗಿಲೆದ್ದು ಬೇರ್ಪಟ್ಟಿದ್ದೇ ಹೆಚ್ಚು.