ಮುಂಬೈ: ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಪ್ರಮಾಣ ವಚನ ಸ್ವೀಕರಿಸಿದ ದಿನದಂದು, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರು 2004, 2009, 2014 2020 ರ ಚುನಾವಣೆ ಅವಧಿಯಲ್ಲಿ ಸಲ್ಲಿಸಿದ ಅಫಿಡವಿಟ್‌ಗಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆಯಿಂದ ನೋಟಿಸ್ ಸ್ವೀಕರಿಸಿರುವುದಾಗಿ ಹೇಳಿದ್ದಾರೆ.
ಈ ನೋಟಿಸ್ ಗಳನ್ನು ಅವರು ಪ್ರೇಮ ಪತ್ರಗಳು ಎಂದು ವ್ಯಂಗವಾಡಿದ್ದಾರೆ.
ಈ ಕುರಿತಾಗಿ ಮರಾಠಿಯಲ್ಲಿ ಟ್ವೀಟ್ ಮಾಡಿರುವ ಅವರು “ಇಂದಿನ ದಿನಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರೀಯ ಏಜೆನ್ಸಿಗಳ ಸಹಾಯವನ್ನು ಬಳಸಲಾಗುತ್ತಿದೆ ಎನ್ನುವುದು ತಿಳಿದುಬಂದಿದೆ,ಅನೇಕ ಶಾಸಕಾಂಗ ಸಭೆಯ ಸದಸ್ಯರು ತಮಗೆ ವಿಚಾರಣೆಯ ಸೂಚನೆಗಳನ್ನು ಸ್ವೀಕರಿಸಿದ್ದಾರೆ ಎಂದು ಹೇಳುತ್ತಾರೆ. ಈಗ ಈ ಹೊಸ ವಿಧಾನವು ಪ್ರಾರಂಭವಾಗಿದೆ. ಐದು ವರ್ಷಗಳ ಹಿಂದೆ ಇಡಿ ಹೆಸರೂ ಗೊತ್ತಿರಲಿಲ್ಲ, ಆದರೆ ಇಂದು ಹಳ್ಳಿಗಳಲ್ಲಿಯೂ ಕೂಡ ನಿಮ್ಮ ಹಿಂದೆ ಇಡಿ ಇರುತ್ತದೆ ಎಂದು ಜನರು ತಮಾಷೆಯಾಗಿ ಮಾತನಾಡುತ್ತಾರೆ ಎಂದು ಅವರು ಹೇಳಿದ್ದಾರೆ.