ಬೆಂಗಳೂರು: ಮುಂದಿನ ವರ್ಷದ ಮೇ ಬಳಿಕವೇ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ನಡೆಯಲು ಸಾಧ್ಯ!
ಹೌದು, ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಗಡಿ ನಿರ್ಣಯ, ಸದಸ್ಯರ ಸಂಖ್ಯೆ ತೀರ್ಮಾನ, ಮೀಸಲಾತಿ ನಿಗದಿ ಆರಂಭ ವಾ ಗಿದ್ದು, ಮುಂದಿನ ಎಪ್ರಿಲ್ ವೇಳೆಗೆ ಇದರ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆಯಿದೆ.
ಈ ಎಲ್ಲ ಪ್ರಕ್ರಿಯೆ ಮುಗಿದ ಅನಂತರವೇ ಈ ಎರಡೂ ಚುನಾ ವಣೆ ನಡೆಯುವ ಸಾಧ್ಯತೆ ಇದೆ.
ಈ ಸಂಬಂಧ ರಚಿಸಲಾಗಿರುವ “ಕರ್ನಾಟಕ ಪಂಚಾಯತ್‌ರಾಜ್ ಕ್ಷೇತ್ರಗಳ ಸೀಮಾ ನಿರ್ಣಯ ಆಯೋಗ’ವು ನಿವೃತ್ತ ಐಎಎಸ್ ಅಧಿಕಾರಿ ಎಂ.ಡಿ. ಲಕ್ಷ್ಮೀ ನಾರಾಯಣ ಅವರ ಅಧ್ಯಕ್ಷತೆಯಲ್ಲಿ ಅಧಿಕೃñ ವಾಗಿ ಕಾರ್ಯಾರಂಭ ಮಾಡಿದೆ. ಪಂಚಾಯತ್‌ಗಳಿಗೆ ಕ್ಷೇತ್ರ, ಸದಸ್ಯರ ಸಂಖ್ಯೆ ಹಾಗೂ ಮೀಸಲಾತಿ ನಿಗದಿ ಪಡಿಸುವ ಅಧಿಕಾರವನ್ನು ರಾಜ್ಯ ಚುನಾ ವಣ ಆಯೋಗದಿಂದ ಹಿಂದಕ್ಕೆ ಪಡೆದು ಸರಕಾರವು ಸೆ. 13ರಂದು ಪ್ರತ್ಯೇಕ ಆಯೋಗ ರಚಿಸಿತ್ತು. ಅದಕ್ಕೆ ಅಕ್ಟೋಬರ್ ಎರಡನೇ ವಾರದಲ್ಲಿ ಅಧ್ಯಕ್ಷರನ್ನು ನೇಮಕ ಮಾಡಲಾಗಿದ್ದು, ನವೆಂಬರ್ ಮೊದಲ ವಾರದಿಂದ ಆಯೋಗವು ಅಧಿಕೃತವಾಗಿ ಕೆಲಸ ಆರಂಭಿಸಿದೆ.
ಈಗಾಗಲೇ ಸಂಬಂಧಪಟ್ಟ ಇಲಾಖೆಗಳ ಜತೆಗೆ ಸಭೆಗಳನ್ನು ನಡೆಸಲಾಗಿದ್ದು, ರಾಜ್ಯ ಚುನಾವಣ ಆಯೋಗದ ಜತೆಗೂ ಸಮಾ ಲೋಚನೆ ನಡೆಸಲಾಗಿದೆ.ಚುನಾವಣ ಆಯೋಗ ನಿಗದಿ ಪಡಿಸಿದ್ದ ಕ್ಷೇತ್ರ ಪುನರ್‌ವಿಂಗಡಣೆ ಮತ್ತು ಮೀಸಲಾತಿಯ ವಿವರಗಳನ್ನು ಸೀಮಾ ನಿರ್ಣಯ ಆಯೋಗಕ್ಕೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ. ಸಿಇಒಗಳಿಗೆ ಪತ್ರ ಬರೆಯಲಾಗಿದೆ. ಸದ್ಯ ದಲ್ಲೇ ಎಲ್ಲ ಜಿಲ್ಲಾಧಿಕಾರಿ ಗಳಿಗೊಂದಿಗೆ ವೀಡಿಯೋ ಸಂವಾದ ನಿಗದಿಪಡಿಸಲಾಗಿದೆ.
6 ತಿಂಗಳ ಕಾಲಾವಧಿ
ಎರಡು ತಿಂಗಳಲ್ಲಿ ಕ್ಷೇತ್ರ, ಸದಸ್ಯರ ಸಂಖ್ಯೆ ಮತ್ತು ಮೀಸಲಾತಿಗೆ ಸಂಬಂಧಿಸಿದ ಕರಡು ಹೊರಡಿಸಲಾ ಗುವುದು. ಅದಕ್ಕೆ ಆಕ್ಷೇಪಣೆ ಸಲ್ಲಿಸಲು 15 ದಿನ ಕಾಲಾವಕಾಶ ನೀಡಿ ಬಳಿಕ ಅಂತಿಮಗೊಳಿಸಲಾಗುವುದು. ಆಯೋಗಕ್ಕೆ ಆರು ತಿಂಗಳು ಕಾಲಾವಧಿ ನೀಡಲಾಗಿದೆ. ಅದರಂತೆ ಮೇ ಜೂನ್‌ವರೆಗೆ ಕಾಲಾವಕಾಶವಿದೆ. ಆದರೆ ನಾಲ್ಕು ತಿಂಗಳಲ್ಲಿ ಅಂದರೆ ಎಪ್ರಿಲ್ ವೇಳೆಗೆ ಪ್ರಕ್ರಿಯೆ ಅಂತಿಮಗೊಳಿಸುವ ಗುರಿಯನ್ನು ಸೀಮಾ ನಿರ್ಣಯ ಆಯೋಗ ಇರಿಸಿಕೊಂಡಿದೆ ಎನ್ನಲಾಗಿದೆ.
ಆಯೋಗಕ್ಕೆ ನಿವೃತ್ತ ಐಎ ಎಸ್ ಅಧಿಕಾರಿ ಎಸ್.ಎಸ್. ಪ ಟ್ಟಣ ಶೆಟ್ಟಿ ಮತ್ತು ವಿಷಯ ತಜ್ಞ ರಾಮಪ್ರಿಯಾ ಅವ ರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಜತೆಗೆ ಅಗತ್ಯ ಸಿಬಂದಿಯನ್ನೂ ಈಗಾಗಲೇ ನಿಯೋಜನೆ ಮಾಡಲಾಗಿದೆ. ಆಯೋಗದ ಅಧಿಕಾರ ಮತ್ತು ಪ್ರಕಾರ್ಯಗಳನ್ನು ನಿಗದಿಪಡಿಸಲಾಗಿದ್ದು, ಆಯೋಗಕ್ಕೆ ಸಿವಿಲ್ ನ್ಯಾಯಾಲಯದ ಅಧಿಕಾರ ನೀಡಲಾಗಿದೆ.
ಈ ಮಧ್ಯೆ ತಾ.ಪಂ. ಮತ್ತು ಜಿ.ಪಂ.ಗಳಿಗೆ ನೇಮಕ ಮಾಡಲಾಗಿದ್ದ ಆಡಳಿತಾಧಿಕಾರಿಗಳ ಅವಧಿಯನ್ನು ಸರಕಾರ ಮತ್ತೆ 6 ತಿಂಗಳು ವಿಸ್ತರಿಸಿದೆ.
ಆಯೋಗದ ಕೆಲಸವೇನು?
ಜನಗಣತಿ ಆಧರಿಸಿ ಜನಸಂಖ್ಯೆಗೆ ಅನು ಗುಣವಾಗಿ ಪ್ರತೀ ಗ್ರಾ.ಪಂ., ತಾ.ಪಂ. ಮತ್ತು ಜಿ.ಪಂ.ಗೆ ಚುನಾ ಯಿಸ ಬೇಕಾದ ಒಟ್ಟು ಸದಸ್ಯರ ಸಂಖ್ಯೆ ಯನ್ನು ನಿಗದಿಪಡಿಸಿ ಆ ಸದಸ್ಯರ ಸಂಖ್ಯೆ ಯನ್ನು ವಾರ್ಡ್ ಅಥವಾ ಕ್ಷೇತ್ರ ಗಳನ್ನಾಗಿ ವಿಂಗಡಿ ಸಲು, ಗಡಿಗಳನ್ನು ನಿರ್ಧರಿಸುವುದು ಮತ್ತು ಮೀಸಲಾತಿ ನಿಗದಿಪಡಿಸಲು ಶಿಫಾರಸು ಮಾಡುವುದು.
ಆಯೋಗದ ಅಧಿಕಾರ
ಸೀಮಾ ನಿರ್ಣಯ ಆಯೋಗಕ್ಕೆ ಸಿವಿಲ್ ನ್ಯಾಯಾಲಯದ ಅಧಿಕಾರ ನೀಡ ಲಾಗಿದ್ದು, ಅದರಂತೆ ಸಾಕ್ಷಿ ಗಳಿಗೆ ಸಮನ್ಸ್ ಮಾಡುವುದು. ಯಾವುದೇ ದಾಖಲೆ, ದಾಸ್ತಾವೇಜು ಹಾಜರು ಪಡಿಸಲು, ಯಾವುದೇ ಇಲಾಖೆಯ ಯಾವುದೇ ಕಚೇರಿಯಿಂದ ಸಾರ್ವಜನಿಕ ದಾಖಲೆ ಗಳನ್ನು ಸಲ್ಲಿಸುವಂತೆ ಸಂಬಂಧಪಟ್ಟವರಿಗೆ ಆದೇಶಿಸುವ ಅಧಿಕಾರವನ್ನು ಆಯೋಗದ ಅಧ್ಯಕ್ಷರು ಹೊಂದಿರುತ್ತಾರೆ.
ಆಯೋಗ ಅಧಿಕೃತವಾಗಿ ಕಾರ್ಯಾರಂಭ ಮಾಡಿದೆ. ಈಗಾಗಲೇ ಹಲವು ಸಭೆಗಳನ್ನು ನಡೆಸಲಾಗಿದೆ. ಮುಂದಿನ ವಾರ ಜಿಲ್ಲಾಧಿಕಾರಿಗಳ ಜತೆಗೆ ವೀಡಿಯೋ ಕಾನ್ಫರೆನ್ಸ್ ನಡೆಸಲು ನಿರ್ಧರಿಸಲಾಗಿದೆ.
– ಎಂ.ಡಿ. ಲಕ್ಷ್ಮೀನಾರಾಯಣ, ಪಂ.ರಾಜ್ ಸೀಮಾ ನಿರ್ಣಯ ಆಯೋಗದ ಅಧ್ಯಕ್ಷ