ಬೆಂಗಳೂರು,ನ.6- ನಿರೀಕ್ಷಿತ ಮಟ್ಟದಲ್ಲಿ ಪಕ್ಷ ಸಂಘಟಿಸುವಲ್ಲಿ ವಿಫಲ, ಉಪಚುನಾವಣೆ ಹಿನ್ನಡೆ, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಸೋತಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರ ಸ್ಥಾನ ಬದಲಾಗಿದೆ ಎಂಬ ವದಂತಿ ಹಬ್ಬಿದೆ.
ಇದೇ 9ರಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಲಿದ್ದು, ಅಂದು ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಖಜಾಂಚಿ, ಜಿಲ್ಲಾ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಕೋರ್ ಕಮಿಟಿ ಮುಖಂಡರ ಜೊತೆ ಸಭೆ ನಡೆಸಲಿದ್ದಾರೆ.
ಇತ್ತೀಚೆಗೆ ನಡೆದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಗೆ ಹಾನಗಲ್‍ನಲ್ಲಿ ಹಿನ್ನೆಡೆಯಾಗಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಹೇಳಲಾಗುತ್ತದೆ. ವಾಸ್ತವವಾಗಿ ನಳೀನ್‍ಕುಮಾರ್ ಕಟೀಲ್ ಅವರನ್ನು ಬದಲಾವu ಮಾಡಿ ತೆರವಾಗಲಿರುವ ಈ ಸ್ಥಾನಕ್ಕೆ ಯಾರನ್ನು ನೇಮಕ ಮಾಡಬೇಕು ಎಂಬುದರ ಬಗ್ಗೆ ಉಸ್ತುವಾರಿಯಾಗಿರುವ ಅರುಣ್ ಸಿಂಗ್ ಪಕ್ಷದ ಪ್ರಮುಖರ ಜೊತೆ ಅಭಿಪ್ರಾಯವನ್ನು ಸಂಗ್ರಹಿಸಲಿದ್ದಾರೆ.
ಸಾಮಾನ್ಯವಾಗಿ ಬಿಜೆಪಿಯಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡುವ ಸಂಪ್ರದಾಯವಿದೆ. ರಾಷ್ಟ್ರ ಮಟ್ಟದಲ್ಲಾಗಲಿ ಅಥವಾ ರಾಜ್ಯ ಮಟ್ಟದಲ್ಲಾಗಲಿ ಒಂದು ಬಾರಿ ಅಧ್ಯಕ್ಷರಾದರೆ ಮೂರು ವರ್ಷ ಅವರ ಸ್ಥಾನ ಅಬಾತ ಎನ್ನಲಾಗುತ್ತಿತ್ತು.
ಆದರೆ ನಳೀನ್‍ಕುಮಾರ್ ಕಟೀಲ್ ಅಧ್ಯಕ್ಷರಾದ ನಂತರ ಸ್ವತಂತ್ರವಾಗಿ ಯಾವುದೇ ಪ್ರಮುಖ ತೀರ್ಮಾನವನ್ನು ತೆಗೆದುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಎಂಬ ಮಾತು ಕೇಸರಿ ಪಾಳೆಯದಲ್ಲಿ ಕೇಳಿಬರುತ್ತಿದೆ. ಪ್ರತಿಯೊಂದನ್ನು ದೆಹಲಿಯಲ್ಲಿರುವ ಕರ್ನಾಟಕವನ್ನು ಪ್ರತಿನಿಸುವ ಪ್ರಭಾವಿ ನಾಯಕರ ಕಣ್ಣಸನ್ನೆಯಂತೆ ಕೆಲಸ ಮಾಡುತ್ತಿದ್ದಾರೆ. ಕೆಳಹಂತದ ಕಾರ್ಯಕರ್ತರನ್ನು ಗುರುತಿಸುವಲ್ಲೂ ಅವರು ವಿಫಲರಾಗಿದ್ದಾರೆ ಎಂಬ ಆರೋಪವಿದೆ.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನವಾಗಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಆ ವೇಳೆ ನಡೆದ 15 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 12 ಕ್ಷೇತ್ರಗಳನ್ನು ಗೆದ್ದಿತ್ತು. ಇದರಲ್ಲಿ ಯಡಿಯೂರಪ್ಪನವರ ಪ್ರಭಾವ ಹಾಗೂ ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸು ಕಾರಣ ಎಂದು ಹೇಳಲಾಗಿತ್ತು.
ನಂತರ ಬಸವ ಕಲ್ಯಾಣ, ಮಸ್ಕಿ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲೂ ಬಿಎಸ್‍ವೈ ಪ್ರಭಾವವೇ ಕೆಲಸ ಮಾಡಿತ್ತು. ಇಲ್ಲಿ ಪಕ್ಷದ ಅಧ್ಯಕ್ಷರಾಗಿರುವ ಕಟೀಲ್ ಅವರ ಕೊಡುಗೆ ಶೂನ್ಯ ಎಂದು ಪಕ್ಷದ ಕಾರ್ಯಕರ್ತರೇ ದೂರುತ್ತಾರೆ.
ಇತ್ತೀಚೆಗೆ ನಡೆದ ಹಾನಗಲ್ ಉಪಚುನಾವಣೆಯಲ್ಲೂ ಸೋಲಿಗೆ ವ್ಯವಸ್ಥಿತ ಸಂಘಟನೆಯ ಕೊರತೆಯೇ ಕಾರಣ ಎನ್ನಲಾಗಿದೆ. ರಾಷ್ಟ್ರೀಯ ಪಕ್ಷವೊಂದರ ಅಧ್ಯಕ್ಷರಾಗಿರುವ ಕಟೀಲ್ ಅವರಲ್ಲಿ, ಪ್ರತಿಪಕ್ಷಗಳ ತಂತ್ರಕ್ಕೆ ಪ್ರತಿತಂತ್ರ ಹೆಣೆಯುವಲ್ಲೂ ಅನುಭವದ ಕೊರತೆ ಕಾಣುತ್ತಿದೆ.
ಕಾಂಗ್ರೆಸ್‍ನಲ್ಲಿ ಕೆಪಿಸಿಸಿಗೆ ಡಿ.ಕೆ.ಶಿವಕುಮಾರ್ ಸಾರಥ್ಯ ವಹಿಸಿದ್ದರೆ ಜೆಡಿಎಸ್‍ನಲ್ಲಿ ಎಚ್.ಕೆ.ಕುಮಾರಸ್ವಾಮಿ ಅಧ್ಯಕ್ಷರಾಗಿದ್ದಾರೆ. ಎಚ್.ಕೆ.ಕುಮಾರಸ್ವಾಮಿ ಹೆಸರಿಗೆ ಅಧ್ಯಕ್ಷರಾಗಿದ್ದರೂ ಪಕ್ಷದ ಪ್ರಮುಖ ತೀರ್ಮಾನಗಳನ್ನು ವರಿಷ್ಠರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ತೆಗೆದುಕೊಳ್ಳುತ್ತಾರೆ.
ಬಿಜೆಪಿಯಲ್ಲಿ ಕಟೀಲ್ ಪ್ರತಿಯೊಂದಕ್ಕೂ ದೆಹಲಿಯಲ್ಲಿ ಕುಳಿತಿರುವ ನಾಯಕರನ್ನೇ ಅವಲಂಬಿಸುತ್ತಾರೆ. ಪದಾಕಾರಿಗಳ ನೇಮಕಾತಿ, ಯಾವುದೇ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ, ಚುನಾವಣಾ ಪ್ರಚಾರ, ಕಾರ್ಯತಂತ್ರ ರೂಪಿಸುವುದರಲ್ಲೂ ವಿಫಲರಾಗಿದ್ದಾರೆ.
ಅಲ್ಲದೆ ಪದೇ ಪದೇ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಪಕ್ಷಕ್ಕೆ ಮುಜುಗರ ಸೃಷ್ಟಿಸುವುದು ಕೂಡ ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಉಪಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಯುವನಾಯಕ ರಾಹುಲ್ ಗಾಂ ಡ್ರಗ್ ಸೇವಿಸುತ್ತಾರೆ ಎಂದು ಹೇಳಿದ್ದು ಭಾರೀ ವಿವಾದವನ್ನೇ ಸೃಷ್ಟಿಸಿತ್ತು.
ಪಕ್ಷಕ್ಕೆ ದುಡಿಯುತ್ತಿದ್ದ ಮಾಜಿ ಸಿಎಂ ಯಡಿಯೂರಪ್ಪ ಬಣದ ಒಬ್ಬೊಬ್ಬರನ್ನೇ ಹಂತ ಹಂತವಾಗಿ ಪಕ್ಷದ ಕಚೇರಿಯಿಂದ ನಾಯಕರೊಬ್ಬರ ನಿರ್ದೇಶನದಂತೆ ಹೊರಹಾಕುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡಿದರು.
ಇದು ತಾಲ್ಲೂಕು ಮಟ್ಟದಿಂದ ಹಿಡಿದು ಜಿಲ್ಲಾ ಮಟ್ಟದಲ್ಲೂ ಬಿಜೆಪಿಯ ಕಾರ್ಯಕರ್ತರಲ್ಲಿ ಭಿನ್ನಾಭಿಪ್ರಾಯಕ್ಕೆ ಕಾರಣವಾಯಿತು. ಎಷ್ಟೇ ಒಗ್ಗಟ್ಟಿನಿಂದ ಇದ್ದೇವೆ ಎಂದರೂ ಯಡಿಯೂರಪ್ಪ ಬಣ ಮತ್ತು ಬಿಜೆಪಿ ಬಣ ಎಂಬ ಭಿನ್ನಾಭಿಪ್ರಾಯವನ್ನು ಹೋಗಲಾಡಿಸಲು ಸಾಧ್ಯವಾಗಲಿಲ್ಲ.
# ದಲಿತರಿಗೆ ಪಟ್ಟ:
ಮೂಲಗಳ ಪ್ರಕಾರ ನಳೀನ್‍ಕುಮಾರ್ ಕಟೀಲ್ ಒಂದು ವೇಳೆ ಅಧ್ಯಕ್ಷ ಸ್ಥಾನದಿಂದ ಇಳಿದರೆ ತೆರವಾಗಲಿರುವ ಈ ಸ್ಥಾನಕ್ಕೆ ದಲಿತ ಸಮುದಾಯದ ಹಾಗೂ ಆರ್‍ಎಸ್‍ಎಸ್ ಹಿನ್ನೆಲೆಯಲ್ಲಿರುವ ವ್ಯಕ್ತಿಯನ್ನೇ ಅಧ್ಯಕ್ಷರನ್ನಾಗಿ ಮಾಡುವ ಸಂಭವವಿದೆ. ಬಿಜೆಪಿ ಮೂಲಗಳು ಹೇಳುವ ಪ್ರಕಾರ ಈ ಬಾರಿ ಅಧ್ಯಕ್ಷ ಸ್ಥಾನವನ್ನು ಆರ್‍ಎಸ್‍ಎಸ್ ಕಟ್ಟಾಳು ಮಾಜಿ ಸಚಿವ ಅರವಿಂದ ಲಿಂಬಾವಳಿಗೆ ನೀಡುವ ಸಂಭವವಿದೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಪಕ್ಷದ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದ ಲಿಂಬಾವಳಿ ಪಕ್ಷ ನಿಷ್ಠರೂ ಹೌದು. ಒಂದು ಕಡೆ ಯಡಿಯೂರಪ್ಪ ವೀರಶೈವ ಮತಗಳನ್ನು ಸೆಳೆದರೆ, ಪರಿಶಿಷ್ಟ ಜಾತಿಗೆ ಗೋವಿಂದ ಕಾರಜೋಳ, ಪರಿಶಿಷ್ಟ ವರ್ಗಕ್ಕೆ ಶ್ರೀರಾಮುಲು, ರಮೇಶ್ ಜಾರಕಿಹೊಳಿ, ಒಕ್ಕಲಿಗ ಸಮುದಾಯಕ್ಕೆ ಆರ್.ಅಶೋಕ್, ಡಾ.ಅಶ್ವಥ್ ನಾರಾಯಣ, ಡಾ.ಕೆ.ಸುಧಾಕರ್, ಎಸ್.ಟಿ.ಸೋಮಶೇಖರ್, ಹಿಂದುಳಿದ ವರ್ಗಕ್ಕೆ ಕೆ.ಎಸ್.ಈಶ್ವರಪ್ಪ, ಕೋಟಾ ಶ್ರೀನಿವಾಸ ಪೂಜಾರಿ ಹೀಗೆ ಜಾತಿ ಸಮೀಕರಣವನ್ನು ಹೆಣೆದು 2023ರ ಚುನಾವಣೆಯನ್ನು ಎದುರಿಸಲು ಬಿಜೆಪಿ ಸಜ್ಜಾಗಿದೆ.