ಮುಂಬೈ: ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ 42 ವರ್ಷದ ಫ್ಯಾಷನ್ ಡಿಸೈನರ್‌ಗೆ ಕಿರುಕುಳ ನೀಡಿದ ಆರೋಪದ ಮೇಲೆ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.ಆರೋಪಿಯನ್ನು ಕೇರಳ ಮೂಲದ ರಾಹುಲ್ ಶ್ರೀವಾಸ್ತವ ಎಂದು ಗುರುತಿಸಲಾಗಿದೆ. ಆರೋಪಿ ಸಿನಿಮಾಕ್ಕಾಗಿ ಸ್ಕ್ರೀನ್ ಟೆಸ್ಟ್ ಸಮಯದಲ್ಲಿ ನನ್ನ ಫೋಟೋಗಳನ್ನು ತೆಗೆದುಕೊಂಡಿದ್ದು, ಅವುಗಳನ್ನು ಅಶ್ಲೀಲ ಚಿತ್ರಗಳಾಗಿ ಮಾರ್ಫ್ ಮಾಡಿದ್ದಾನೆ. ಬಳಿಕ ತನ್ನೊಂದಿಗೆ ದೈಹಿಕ ಸಂಬಂಧವನ್ನು ಹೊಂದಬೇಕು, ಇಲ್ಲವಾದರೆ ಮಾರ್ಫ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಶ್ರೀವಾಸ್ತವ ಮತ್ತು ಫ್ಯಾಷನ್ ಡಿಸೈನರ್ ಇಬ್ಬರಿಗೂ ವಾಟ್ಸಪ್ ಗ್ರೂಪಿನ ಮೂಲಕ ಪರಿಚಯವಾಗಿದೆ. ನಂತರ ಶ್ರೀವಾಸ್ತವ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಸಂತ್ರಸ್ತೆಗೆ ಹೇಳಿದ್ದಾನೆ. ಅಲ್ಲದೇ ಆ ಸಿನಿಮಾವನ್ನು ತಾನೇ ನಿರ್ದೇಶಿಸುತ್ತಿದ್ದೇನೆಂದು ಹೇಳಿಕೊಂಡಿದ್ದನು. ಬಳಿಕ ನಗರದ ಹೋಟೆಲ್‍ಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಸಮೀರ್ ಎಂಬತಾನ ಜೊತೆ ಚರ್ಚೆ ಮಾಡಿದ್ದನು.ಕೆಲವು ದಿನಗಳ ನಂತರ ಶ್ರೀವಾಸ್ತವ ಸಂತ್ರಸ್ತೆಯನ್ನು ಸ್ಕ್ರೀನ್ ಟೆಸ್ಟ್ ನಡೆಸಲು ಮುಂಬೈಗೆ ಬರಲು ಹೇಳಿದ್ದನು. ಸಂತ್ರಸ್ತೆ ಮುಂಬೈಗೆ ಬರಲು ಸಾಧ್ಯವಿಲ್ಲ ಎಂದು ನಿರಾಕರಿಸಿದ್ದಾರೆ. ನಂತರ ವಿಡಿಯೋ ಕಾಲ್ ಮೂಲಕ ಮಾಡಿನಾಡಿದ್ದಾರೆ. ಈ ವೇಳೆ ಆರೋಪಿ ಸ್ಕ್ರೀನ್‍ಶಾಟ್‍ಗಳನ್ನು ತೆಗೆದುಕೊಂಡು ಅದನ್ನ ಮಾರ್ಫಿಂಗ್ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆಕೊನೆಗೆ ಮಹಿಳೆ ಶ್ರೀವಾಸ್ತವ ಇದ್ದ ವಾಟ್ಸಪ್ ಗ್ರೂಪಿನಿಂದ ನಿರ್ಗಮಿಸಿ, ಆತನ ನಂಬರನ್ನು ಬ್ಲಾಕ್ ಮಾಡಿದ್ದಾರೆ. ಆದರೂ ಬೇರೆ ಬೇರೆ ನಂಬರ್ ಮೂಲಕ ಅಶ್ಲೀಲ ಫೋಟೋಗಳು ಮತ್ತು ವಿಡಿಯೋಗಳನ್ನು ಮಹಿಳೆಗೆ ಕಳುಹಿಸುತ್ತಿದ್ದನು. ಇದರಿಂದ ನೊಂದ ಮಹಿಳೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಸದ್ಯಕ್ಕೆ ಪೊಲೀಸರು ಆರೋಪಿ ರಾಹುಲ್ ಶ್ರೀವಾಸ್ತವ ವಿರುದ್ಧ ಐಪಿಸಿ ಸೆಕ್ಷನ್ ಮತ್ತು ಐಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.