ಕಿಂಗ್ಸ್‌ಟನ್: ಭಾರತದ ಅಗ್ರಶ್ರೇಯಾಂಕದ ಓಟಗಾರ್ತಿ ಶ್ರಬನಿ ನಂದಾ ಅವರು ಜಮೈಕಾದಲ್ಲಿ ನಡೆದ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ್ದಾರೆ. ಆ ಮೂಲಕ ಕೊರೊನಾ ಕಾಲದಲ್ಲಿ ಟ್ರ್ಯಾಕ್ ಮತ್ತು ಫೀಲ್ಡ್‌ಗೆ ಇಳಿದ ಭಾರತದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಹೋದ ಭಾನುವಾರ ಜಮೈಕಾದಲ್ಲಿ ನಡೆದಿದ್ದ ವೆಲಾಸಿಟಿ ಉತ್ಸವದ 100 ಮೀಟರ್ ಓಟದಲ್ಲಿ ನಂದಾ ಸ್ಪರ್ಧಿಸಿದ್ದರು. ಅವರು ಆ ಕೂಟದಲ್ಲಿ ಎಂವಿಪಿ ಟ್ರ್ಯಾಕ್ ಕ್ಲಬ್ ಅನ್ನು ಪ್ರತಿನಿಧಿಸಿದ್ದರು.
ಎರಡು ಹೀಟ್ಸ್‌ಗಳಲ್ಲಿ 11.78 ಸೆಕೆಂಡುಗಳಲ್ಲಿ ಗುರಿ ಮುಟ್ಟಿ, ಮೂರನೇ ಸ್ಥಾನ ಗಳಿಸಿದ್ದರು. ಒಲಿಂಪಿಕ್ಸ್‌ನಲ್ಲಿ ಡಬಲ್ ಚಿನ್ನದ ಸಾಧನೆ ಮಾಡಿರುವ ಎಲೇನಾ ಥಾಂಪ್ಸನ್ ಮತ್ತು ಶೆಲ್ಲಿ ಆಯನ್ ಫ್ರೇಸರ್ ಪ್ರೈಸ್ ಕೂಡ ಆ ಕೂಟದಲ್ಲಿ ಸ್ಪರ್ಧಿಸಿದ್ದರು. ಎಲೇನಾ ಥಾಂಪ್ಸನ್ ಮೊದಲ ಸ್ಥಾನ ಗಳಿಸಿದ್ದರು.
ಫ್ರೇಸರ್ ಅವರು ನೈಕಿ ತಂಡವನ್ನು ಪ್ರತಿನಿಧಿಸಿದ್ದರು. ಮಹಿಳೆಯರ 200 ಮೀಟರ್ಸ್ ಓಟದಲ್ಲಿ 22.74 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಮೊದಲಿಗರಾದರು.
ಪುರುಷರ 200 ಮೀ ಓಟದಲ್ಲಿ ವಿಶ್ವ ಚಾಂಪಿಯನ್ ಯೋಹಾನ್ ಬ್ಲೇಕ್ ಜಯಭೇರಿ ಬಾರಿಸಿದರು. 20.62 ಸೆಕೆಂಡುಗಳಲ್ಲಿ ಗುರಿ ತಲುಪಿದರು.
ಮಹಿಳೆಯರ 100 ಮೀಟರ್ಸ್ ಓಟದಲ್ಲಿ ನಂದಾ ಅವರ ವೈಯಕ್ತಿಕ ಶ್ರೇಷ್ಠ ಸಮಯ 11.45 ಸೆಕೆಂಡುಗಳಾಗಿವೆ. 200 ಮೀಟರ್ಸ್‌ನಲ್ಲಿ 23.07 ಸೆಕೆಂಡುಗಳು ಅವರ ವೈಯಕ್ತಿಕ ಶ್ರೇಷ್ಠವಾಗಿದೆ. 2016ರ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಅವರು ಹೀಟ್ಸ್‌ನಲ್ಲಿ ಆರನೇ ಸ್ಥಾನ ಪಡೆದಿದ್ದರು.
2017ರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ 4X100 ಮೀ ರಿಲೆಯಲ್ಲಿ ಕಂಚು ಗೆದ್ದಿದ್ದ ಭಾರತ ತಂಡದಲ್ಲಿ ನಂದಾ ಕೂಡ ಇದ್ದರು.