Breaking News

ರಾಜಸ್ಥಾನದಲ್ಲಿ ಬಿಎಸ್​ಪಿಯ 6 ಶಾಸಕರು ಅನರ್ಹಗೊಳ್ಳುತ್ತಾರಾ? ರಾಜಕೀಯ ನಾಟಕಕ್ಕೆ ಸಿಗುತ್ತಾ ಹೊಸ ತಿರುವು?

Spread the love

ಜೈಪುರ: ರಾಜಸ್ಥಾನದ ವಿಧಾನಸಭಾ ಅಧಿವೇಶನ ಶುಕ್ರವಾರ (ಆ.14) ನಡೆಯಲಿರುವ ಹಿನ್ನೆಲೆಯಲ್ಲಿ ರಾಜಕೀಯ ನಾಟಕದ ಹೊಸ ಅಂಕಕ್ಕೆ ಪರದೆ ಮೇಲೇರಲಾರಂಭಿಸಿದೆ. ಬಿಎಸ್​ಪಿಯ 6 ಶಾಸಕರು ಕಾಂಗ್ರೆಸ್​ನಲ್ಲಿ ವಿಲೀನಗೊಂಡಿರುವ ಪ್ರಕರಣದ ಕುರಿತ ಅರ್ಜಿಯ ವಿಚಾರಣೆ ರಾಜಸ್ಥಾನ ಹೈಕೋರ್ಟ್​ನಲ್ಲಿ ನಡೆಯಲಿದ್ದು, ರಾಜಕೀಯ ನಾಟಕದ ಈ ಅಂಕದಲ್ಲಿ ಭಾರಿ ತಿರುವು ಲಭಿಸುವ ಸಾಧ್ಯತೆಗಳು ಕಾಣಿಸಲಾರಂಭಿಸಿವೆ.

 

ಒಂದು ವೇಳೆ ಬಿಎಸ್​ಪಿಯ ಆರು ಶಾಸಕರನ್ನು ಹೈಕೋರ್ಟ್​ ಅನರ್ಹಗೊಳಿಸಿದರೆ, ರಾಜಕೀಯ ಸಮೀಕರಣವೇ ಬದಲಾಗಲಿದೆ. ತಮ್ಮ ಸರ್ಕಾರವನ್ನು ಶತಾಯಗತಾಯ ಉಳಿಸಿಕೊಳ್ಳಲು ಹವಣಿಸಲಿರುವ ಸಿಎಂ ಅಶೋಕ್​ ಗೆಹ್ಲೋಟ್​ ಅವರು ಬಿಜೆಪಿಯ ಶಾಸಕರನ್ನು ತಮ್ಮತ್ತ ಸೆಳೆಯಲು ಯತ್ನಿಸುವುದು ನಿಶ್ಚಿತವಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಜೆಪಿ ಕೂಡ ತನ್ನ ಶಾಸಕರನ್ನು ಗುಜರಾತ್​ಗೆ ರವಾನಿಸಿದೆ.

ಉದಯಪುರದ ಸಾಲುಂಬರ್​ ಶಾಸಕ ಅಮೃತ್​ ಲಾಲ್​ ಮೀನಾ, ಝಾಡೋಲ್​ ಶಾಸಕ ಬಾಬುಲಾಲ್​ ಖರಾಡಿ, ಮಾವ್ಲಿ ಶಾಸಕ ಧರ್ಮ್​ ನಾರಾಯಣ ಜೋಷಿ, ಉದಯಪುರ ಗ್ರಾಮೀಣ ಶಾಸಕ ಪೂಲ್​ ಸಿಂಗ್​ ಮೀನಾ ಮತ್ತು ಗೋಗುಂಡಾ ಶಾಸಕ ಪ್ರತಾಪ್​ ಗಮೇತಿ ಸೇರಿ ಒಟ್ಟು ಐವರು ಶಾಸಕರನ್ನು ಬಿಜೆಪಿ ಈಗಾಗಲೆ ಗುಜರಾತ್​ಗೆ ಸ್ಥಳಾಂತರಿಸಿದೆ. ರಾಜಸ್ಥಾನದ ಪ್ರತಿಪಕ್ಷ ನಾಯಕ ಗುಲಾಬ್​ ಚಂದ್​ ಕಟಾರಿಯಾ ಇನ್ನೂ ಗುಜರಾತ್​ಗೆ ಸ್ಥಳಾಂತರಗೊಂಡಿಲ್ಲ ಎನ್ನಲಾಗಿದೆ.

ರಾಜಸ್ಥಾನದ ಮಾಜಿ ಸಿಎಂ ವಸುಂಧರಾ ರಾಜೆ ಬುಧವಾರ ರಾತ್ರಿ ದೆಹಲಿಗೆ ತೆರಳಿದ್ದು, ಪಕ್ಷದ ಹಿರಿಯ ಮುಖಂಡರ ಜತೆ ಮಾತುಕತೆ ನಡೆಸಿದರು ಎನ್ನಲಾಗಿದೆ. ಇವರು ಜೈಪುರದಲ್ಲಿ ಇರದೆ, ಧೋಲ್​ಪುರ್​ನಿಂದ ದೆಹಲಿಗೆ ತೆರಳಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ರಾಜಸ್ಥಾನದ ಡಿಸಿಎಂ ಆಗಿದ್ದ ಸಚಿನ್​ ಪೈಲಟ್​ ಅವರು ತಮ್ಮ ಪಕ್ಷದ ಸಿಎಂ ಅಶೋಕ್​ ಗೆಹ್ಲೋಟ್​ ವಿರುದ್ಧ ಹಠಾತ್ತನೆ ಬಂಡಾಯ ಎದ್ದಿದ್ದು ರಾಜಸ್ಥಾನದಲ್ಲಿನ ಸದ್ಯದ ರಾಜಕೀಯ ಅಸ್ಥಿರತೆಗೆ ಕಾರಣವಾಗಿದೆ. ಇದರಿಂದಾಗಿ ಬಿಜೆಪಿ ಪಾಳೆಯದಲ್ಲಿ ಕೂಡ ಭಾರಿ ಚಟುವಟಿಕೆ ಗರಿಗೆದರಿದೆ. ಆದರೆ, ಕಳೆದ ತಿಂಗಳು ಜೈಪುರದಲ್ಲಿ ನಡೆದ ಬಿಜೆಪಿಯ ಹಿರಿಯ ಮುಖಂಡರ ಸಭೆಯಿಂದ ವಸುಂಧರ ರಾಜೆ ಅವರು ದೂರವುಳಿದಿದ್ದು, ಹಲವು ವದಂತಿಗಳಿಗೆ ಕಾರಣವಾಗಿತ್ತು.

ವಿಧಾನಸಭಾ ಅಧಿವೇಶನಕ್ಕೂ ಮುನ್ನ ಆಪರೇಷನ್​ ಕಮಲದ ಮೂಲಕ ತಮ್ಮ ಪಕ್ಷದ ಶಾಸಕರನ್ನು ಬಿಜೆಪಿ ಸೆಳೆಯುವ ಸಾಧ್ಯತೆ ಇದೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್​ ತನ್ನ ಶಾಸಕರು ಮತ್ತು ಬೆಂಬಲಿಗ ಶಾಸಕರನ್ನು ಜೈಪುರದ ಹೊರವಲಯದಲ್ಲಿರುವ ಪಂಚತಾರಾ ಹೋಟೆಲ್​ಗೆ ಮತ್ತು ಜೈಸಲ್ಮೇರ್​ನಲ್ಲಿರುವ ಭಾರಿ ಐಷಾರಾಮಿ ಹೋಟೆಲ್​ಗೆ ಈಗಾಗಲೆ ಸ್ಥಳಾಂತರಿಸಿದೆ.


Spread the love

About Laxminews 24x7

Check Also

ಗುಲ್ಬರ್ಗಾ ವಿವಿ ಅತಿ ಹಿಂದುಳಿದ ವಿಶ್ವವಿದ್ಯಾಲಯ ಆಗಿದೆ : ಮಲ್ಲಿಕಾರ್ಜುನ್​ ಖರ್ಗೆ

Spread the loveಕಲಬುರಗಿ : ಜಿಲ್ಲೆಯಲ್ಲಿ ಜಯದೇವ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕಲಬುರಗಿ ಬೆಂಗಳೂರಿನಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ