ಹೊಸದಿಲ್ಲಿ: ಖಾಸಗಿ ಕಂಪೆನಿಗಳ ಪಾಲುದಾರಿಕೆಯಲ್ಲಿ ಆರಂಭವಾಗಲಿರುವ ರೈಲು ಸೇವೆಗಳಿಗೆ ಮತ್ತಷ್ಟು ಕಟ್ಟುನಿಟ್ಟಿನ ನಿಯಮಗಳನ್ನು ಹೇರಲು ರೈಲ್ವೆ ಇಲಾಖೆ ಮುಂದಾಗಿದೆ. ಸಮಯ ಪರಿಪಾಲನೆ ಮಾಡದ ರೈಲುಗಳ ಮೇಲೆ ದಂಡ ವಿಧಿಸುವ, ಸುಳ್ಳು ಆದಾಯ ತೋರಿಸುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವಂಥ ನಿಯಮಗಳನ್ನು ಪ್ರಕಟಿಸಲಾಗಿದೆ.
ತಡವಾದರೆ, ಬೇಗ ಬಂದರೆ ದಂಡ: ಖಾಸಗಿ ರೈಲೊಂದು ನಿಲ್ದಾಣದಿಂದ ತಡವಾಗಿ ಹೊರಟರೆ ಅಥವಾ ನಿಗದಿತ ನಿಲ್ದಾಣವನ್ನು ತಡವಾಗಿ ತಲುಪಿದರೆ ಆ ರೈಲನ್ನು ನಿರ್ವಹಿಸುವ ಖಾಸಗಿ ಕಂಪೆನಿಯ ಮೇಲೆ ದಂಡ ವಿಧಿಸಲಾಗುತ್ತದೆ. ಅದು ಹೇಗೆಂದರೆ, ರೈಲ್ವೆ ಇಲಾಖೆಯ ಮೂಲ ಸೌಕರ್ಯಗಳ ಬಳಕೆ ಶುಲ್ಕ (ಹೌಲೇಜ್ ಶುಲ್ಕ) ಪ್ರತಿ ಕಿ.ಮೀ.ಗೆ 512 ರೂ. ನಿಗದಿಯಾಗಿದ್ದು, ಆ ಶುಲ್ಕವನ್ನು 200 ಕಿ.ಮೀ.ವರೆಗೆ ಲೆಕ್ಕ ಹಾಕಿ, ಆ ರೈಲು, ನಿಲ್ದಾಣಕ್ಕೆ ಎಷ್ಟು ತಡವಾಗಿ ಬಂತೋ ಅಷ್ಟು ಶೇಕಡವಾರು ಅವಧಿಗೆ ತಕ್ಕಂತೆ ದಂಡ ಪಾವತಿಸ ಬೇಕಿರುತ್ತದೆ.
ಹಾಗೆಯೇ, ಯಾವುದೇ ರೈಲು, ನಿಲ್ದಾಣವನ್ನು ಬೇಗನೇ ತಲುಪಿದರೆ 10 ಕಿ.ಮೀ.ವರೆಗಿನ ಹೌಲೇಜ್ ಶುಲ್ಕವನ್ನು ದಂಡದ ರೂಪದಲ್ಲಿ ಕಟ್ಟಬೇಕಿರುತ್ತದೆ.
ಪ್ರಯಾಣ ರದ್ದಾದರೆ ದಂಡ: ಯಾವುದೇ ರೈಲು ಮಾರ್ಗದಲ್ಲಿ ಸಂಚರಿಸಬೇಕಿದ್ದ ಖಾಸಗಿ ರೈಲು ರದ್ದಾದರೆ, ಖಾಸಗಿ ಸಂಸ್ಥೆ ರೈಲ್ವೆ ಇಲಾಖೆಗೆ ಆ ಮಾರ್ಗದ ಬಳಕೆಗಾಗಿ ತಾನು ನೀಡಬೇಕಿದ್ದ ಹೌಲೇಜ್ ಶುಲ್ಕದಲ್ಲಿ ಶೇ. 25ರಷ್ಟನ್ನು ದಂಡದ ರೂಪದಲ್ಲಿ ರೈಲ್ವೆ ಇಲಾಖೆಗೆ ನೀಡಬೇಕಿರುತ್ತದೆ.
ರೈಲ್ವೆಯಲ್ಲಿನ ಮೂಲ ಸೌಕರ್ಯದಲ್ಲಿನ ಕೊರತೆ, ತೊಂದರೆಯಿಂದಾಗಿ ಖಾಸಗಿ ರೈಲು ನಿಗದಿತ ವೇಳೆಗಿಂತ ತಡವಾಗಿ ನಿಲ್ದಾಣಕ್ಕೆ ಬಂದರೆ ಆಗ ರೈಲ್ವೆ ಇಲಾಖೆಯಿಂದ ಖಾಸಗಿ ಸಂಸ್ಥೆಗೆ 50 ಕಿ.ಮೀ.ವರೆಗಿನ ಹೌಲೇಜ್ ಶುಲ್ಕದ ಲೆಕ್ಕದಲ್ಲಿ ಪರಿಹಾರ ಸಿಗಲಿದೆ.
*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??