ನವದೆಹಲಿ: ಜಗದ್ವಿಖ್ಯಾತ ಪುರಿ ಜಗನ್ನಾಥ ರಥಯಾತ್ರೆಯನ್ನು ನಡೆಸಲು ಸುರ್ಪೀಂ ಕೋರ್ಟ್ ಷರತ್ತುಬದ್ದ ಅನುಮತಿ ನೀಡಿದೆ. ರಥಯಾತ್ರೆ”ಸೂಕ್ಷ್ಮವಾಗಿ ನಿರ್ವಹಿಸಲು” ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. ಅಲ್ಲದೆ ದೇವಾಲಯ ರಥಯಾತ್ರೆ ನಿರ್ವಹಣೆ ಜವಾಬ್ದಾರಿಯನ್ನು ಕೇಂದ್ರ ಮತ್ತು ದೇವಾಲಯ ನಿರ್ವಹಣೆ ಮಂಡಳಿಗೆ ವಹಿಸಿದೆ.
ಇದರೊಡನೆ ಸುಪ್ರಸಿದ್ದ ಪುರಿ ಜಗನ್ನಾಥ ರಥ ಯಾತ್ರೆಗೆ ಹಾದಿ ಸುಗಮವಾಗಿದೆ. ಆದರೆ ನ್ಯಾಯಾಲಯ ಕೆಲ ಷರತ್ತು ಸಹ ವಿಧಿಸಿದೆ ಭಕ್ತರು ಇಲ್ಲದೆಯೇ ರಥಯಾತ್ರೆ ನಡೆಸಬೇಕು, ರಥಯಾತ್ರೆ ಕೈಂಕರ್ಯದ ನೇರ ಪ್ರಸಾರ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ.
ಜೂನ್ 18 ರಂದು ನೀಡಿದ್ದ ತನ್ನ ತೀರ್ಪನ್ನು ಬದಲಾಯಿಸಿ ಈ ಸಂಬಂಧ ಸುಪ್ರೀಂ ಕೋರ್ಟ್ ನ್ಯಾಯಪೀಠ ಆದೇಶಿಸಿದೆ.
ಕೊರೊನಾ ವೈರಸ್ ಸಾಂಕ್ರಾಮಿಕ ಹಿನ್ನಲೆಯಲ್ಲಿ ರಥಯಾತ್ರೆ ನಡೆಸಲು ಅನುಮತಿ ನೀಡಲು ಸುಪ್ರೀಂಕೋರ್ಟ್ ಈ ಮೊದಲು ನಿರಾಕರಿಸಿತ್ತು.
ಲಾಕ್ ಡೌನ್ ನಿರ್ಬಂಧಗಳನ್ನು ಉಲ್ಲಂಘಿಸಿ ರಥಯಾತ್ರೆ ನಡೆಸಿದರೆ ಆ ದೇವರು ನಮ್ಮನ್ನು ಕ್ಷಮಿಸುವುದಿಲ್ಲ ಎಂದು ಈ ಹಿಂದೆ ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು.
ಸಾಮಾಜಿಕ ಅಂತರ ನಿಬಂಧನೆಗಳಿಗೆ ಪ್ರಾಮುಖ್ಯತೆ ಕಲ್ಪಿಸಲು ಯಾತ್ರೆ ನಿರ್ವಹಣೆಯಲ್ಲಿ ಯಂತ್ರಗಳು , ಅನೆಗಳ ಬಳಕೆ ಬಗ್ಗೆ ಹೈಕೋರ್ಟ್ ಒಲವು ತೋರಿಸಿರುವುದು ದೇಗುಲದ ಸತ್ ಸಂಪ್ರದಾಯ ಹಾಗೂ ಕಾಯ್ದೆಗೆ ವಿರುದ್ದ ಎಂದು ಆರ್ಜಿದಾರರರ ವಾದಕ್ಕೆ ಸಮ್ಮತಿ ವ್ಯಕ್ತಪಡಿಸಿದ್ದ ನ್ಯಾಯಪೀಠ ಜೂನ್ ೧೮ ರಂದು ಪುರಿ ಜಗನ್ನಾಥ್ ರಥ ಯಾತ್ರೆಗೆ ತಡೆಯಾಜ್ಞೆ ವಿಧಿಸಿ ಆದೇಶಿಸಿತ್ತು.
ಇದೀಗ ಕೋರ್ಟ್ ಅನುಮತಿ ದೊರೆತ ಹಿನ್ನೆಲೆಯಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಭುವನೇಶ್ವರದಲ್ಲಿ ಇಂದು ಸಂಜೆ 5 ಗಂಟೆಗೆ ರಥಯಾತ್ರೆ ಪೂರ್ವಸಿದ್ಧತಾ ಸಭೆ ನಡೆಸಲಿದ್ದಾರೆ.