ನವದೆಹಲಿ: ಗಡಿಯಲ್ಲಿ ಪುಂಡಾಟಿಕೆ ಮಾಡುವ ಚೀನಾಕ್ಕೆ ಸೂಕ್ತ ಉತ್ತರ ನೀಡಲು ಭಾರತೀಯ ಸೇನಾ ಪಡೆಗಳಿಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಪೂರ್ವ ಲಡಾಕ್‍ನಲ್ಲಿ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಸೇನಾ ಮುಖ್ಯಸ್ಥರ ಜೊತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಡೆಸಿದ ಮಹತ್ವದ ಸಭೆಯಲ್ಲಿ ಈ ಮಹತ್ವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಚೀನಾ ಗಡಿಯಲ್ಲಿ ಹೆಚ್ಚುವರಿ ಸೇನೆ ನಿಯೋಜನೆ ಮಾಡಿಕೊಳ್ಳುತ್ತಿದ್ದು, ಮತ್ತೆ ಆಕ್ರಮಣ ಮಾಡುವ ಸಾಧ್ಯತೆಗಳಿದೆ. ಚೀನಾ ಗಡಿಯುದ್ಧಕ್ಕೂ ಕಠಿಣ ಕಣ್ಗಾವಲು ನೀತಿ ಅಳವಡಿಸಿಕೊಳ್ಳಬೇಕು. ಚೀನಾ ಪಡೆಗಳ ಪ್ರಚೋದನಾತ್ಮಕ ವರ್ತನೆಗಳಿಗೆ ಕಠಿಣ ಉತ್ತರ ನೀಡುವಂತೆ ಸಭೆಯಲ್ಲಿ ರಾಜನಾಥ್ ಸೇನಾ ಮುಖ್ಯಸ್ಥರಿಗೆ ಸೂಚಿಸಿದರು ಎಂದು ಮೂಲಗಳು ಹೇಳಿವೆ.
ಚೀನಾ ಸೇನಾ ಸಿದ್ಧತೆ ಹಿನ್ನೆಲೆಯಲ್ಲಿ ಭಾರತವೂ ಯುದ್ಧ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ವಾಯುಪಡೆ ಕೂಡ ಕಾರ್ಯಾಚರಣೆ ನಡೆಸಲು ಪೂರ್ವ ಲಡಾಖ್‍ನ ಆಯಕಟ್ಟಿನ ಜಾಗಗಳನ್ನು ಗುರುತಿಸಿ ಸಮರಕ್ಕೆ ಸಜ್ಜಾಗಿದೆ ಎಂದು ಸೇನಾ ಮುಖ್ಯಸ್ಥರು ಸಭೆಯಲ್ಲಿ ಸಚಿವರಿಗೆ ವರದಿ ನೀಡಿದ್ದಾರೆ.
ಸಭೆಯಲ್ಲಿ ಮೂರು ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಭೂ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ, ನೌಕಾ ಸೇನಾ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್, ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್.ಎಸ್.ಕೆ.ಭದೌರಿಯಾ ಉಪಸ್ಥಿತರಿದ್ದರು.
https://youtu.be/E5GnkH9QWTc