ಬೆಂಗಳೂರು: ಈ ವರ್ಷ ಪ್ರಾಥಮಿಕ ಶಾಲೆ ಬೇಡವೇ ಬೇಡ… 2020-21 ಅನ್ನು ಶೂನ್ಯ ಶೈಕ್ಷಣಿಕ ವರ್ಷವೆಂದು ಘೋಷಣೆ ಮಾಡಿಬಿಡಿ…
ಇದು ರಾಜ್ಯದ ಬಹುತೇಕ ಮಕ್ಕಳ ಹೆತ್ತವರು, ಶಿಕ್ಷಕರು, ವಿದ್ಯಾರ್ಥಿಗಳು, ಜನತೆಯ ಅಭಿಪ್ರಾಯ. “ಉದಯವಾಣಿ’ ನಡೆಸಿದ ಮೆಗಾ ಸರ್ವೇಯಲ್ಲಿ 4 ಸಾವಿರಕ್ಕೂ ಹೆಚ್ಚು ಮಂದಿ ಅಭಿಪ್ರಾಯ ತಿಳಿಸಿದ್ದು, ಕೊರೊನಾ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಇಂಥ ಸಂದರ್ಭದಲ್ಲಿ ಪುಟ್ಟ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವೇ ಎಂಬ ಪ್ರಶ್ನೆಯನ್ನೂ ಕೇಳಿದ್ದಾರೆ. ಆದರೆ ಎಸೆಸೆಲ್ಸಿ ಮತ್ತು ಪಿಯುಸಿ ಮಕ್ಕಳ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಜನತೆ, ಇವರಿಗಾದರೂ ತರಗತಿ ಆರಂಭವಾಗಲಿ ಎಂದಿದ್ದಾರೆ. ವಿದ್ಯಾಗಮ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವಂತೆ ಒತ್ತಾಸೆ ಕೇಳಿಬಂದಿದೆ.
ಆನ್‌ಲೈನ್ ಶಿಕ್ಷಣದ ಬಗ್ಗೆ ಅಸಹನೆ ವ್ಯಕ್ತಪಡಿಸಿದ್ದಾರೆ.
ಪರಿಸ್ಥಿತಿ ನೋಡಿ ತೀರ್ಮಾನ
ಪ್ರಾಥಮಿಕ ತರಗತಿಗಳನ್ನು ಕೊರೊನಾ ಸ್ಥಿತಿ ಗಮನಿಸಿ ತೆರೆಯೋಣ. ಒಂದೊಮ್ಮೆ ಸುಧಾರಿಸಿದರೆ ಕೊರೊನಾ ನಿಯಂತ್ರಣ ಮಾರ್ಗಸೂಚಿ ಅಳವಡಿಸಿಕೊಂಡು ಶಾಲೆ ತೆರೆಯಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ವರ್ಷ ಶಾಲೆ ತೆರೆಯುವುದೇ ಬೇಡ ಎಂದವರು 2ನೇ ಸ್ಥಾನದಲ್ಲಿದ್ದಾರೆ. ಯಾಕೆ ಶಾಲೆ ಆರಂಭಿಸಬಾರದು ಎಂಬುದಕ್ಕೆ ಜನರೇ ಕಾರಣ ನೀಡಿದ್ದಾರೆ. ಎಚ್ಚರಿಕೆಗಳನ್ನು ಮಕ್ಕಳು ಪಾಲಿಸಬಲ್ಲರೇ ಎಂಬ ಪ್ರಶ್ನೆ ಅವರದು. ಶಿಕ್ಷಣಕ್ಕಿಂತ ಮಕ್ಕಳ ಆರೋಗ್ಯವೇ ಮುಖ್ಯ ಎಂಬುದು ಎಲ್ಲರ ಅಭಿಪ್ರಾಯದ ಸಾರಾಂಶ.
ಮಕ್ಕಳ ಭವಿಷ್ಯ ಹಾಳಾಗುವುದಿಲ್ಲ
ಶಾಲೆ ಆರಂಭವಾಗದಿದ್ದರೆ ಮಕ್ಕಳ ಭವಿಷ್ಯವೇ ಹಾಳಾಗುತ್ತದೆ ಎಂಬುದರಲ್ಲಿ ಸಂಪೂರ್ಣ ಸತ್ಯಾಂಶವಿಲ್ಲ ಎಂಬುದು ಸಮೀಕ್ಷೆಯಲ್ಲಿ ಭಾಗಿಯಾದ ಹಲವರ ಮಾತು. ಇನ್ನು ಕೆಲವರು ಹೇಳುವುದು 1ರಿಂದ 9ನೇ ತರಗತಿಯ ವರೆಗೆ ಶಾಲೆ ಆರಂಭ ಬೇಡ ಎಂದು. ಸಾಮಾಜಿಕ ಅಂತರದ ಸ್ಪಷ್ಟ ಪರಿಕಲ್ಪನೆ ಮಕ್ಕಳಿಗೆ ಗೊತ್ತಿರುವುದಿಲ್ಲ ಎಂಬ ಅಭಿಪ್ರಾಯವಿದೆ. ಇದರ ನಡುವೆಯೇ ಒಂದಷ್ಟು ಮಂದಿ ಕೊರೊನಾ ಕಡಿಮೆ ಇರುವೆಡೆ ಮಾತ್ರ ಶಾಲಾ- ಕಾಲೇಜು ತೆರೆಯಬಹುದು ಎಂದಿದ್ದಾರೆ.
ಪ್ರೌಢಶಾಲೆ ಇರಲಿ
ಪ್ರಾಥಮಿಕ ಶಾಲೆಗಳ ಆರಂಭಕ್ಕೆ ವಿರೋಧ ವ್ಯಕ್ತಪಡಿಸಿದ ಜನರು ಪ್ರೌಢಶಾಲೆ ಪ್ರಾರಂಭಿಸಬಹುದು ಎಂದೂ ಅಭಿಪ್ರಾಯಪಟ್ಟಿದ್ದಾರೆ. ಎಸೆಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಜೀವನದಲ್ಲಿ ಅತೀ ಮುಖ್ಯವಾಗಿರುವುದರಿಂದ 9ನೇ ತರಗತಿಯಿಂದ ಪಿಯುಸಿಯ ವರೆಗೆ ಪಾಳಿ ಲೆಕ್ಕಾಚಾರದಲ್ಲಿ ಶಾಲೆ ಆರಂಭಿಸಬಹುದು ಎಂಬ ಅಭಿಪ್ರಾಯ ಕೇಳಿಬಂದಿದೆ. ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಹೆಚ್ಚಿನ ಮಂದಿ ಅ. 15ರಿಂದಲೇ ಪ್ರೌಢಶಾಲೆಗಳು ಆರಂಭವಾಗಲಿ ಎಂದಿದ್ದಾರೆ.
ಸಮೀಕ್ಷೆಯಲ್ಲಿ ವ್ಯಕ್ತವಾದ ಅಂಶಗಳು
ಶಾಲೆ ಏಕೆ ಆರಂಭಿಸಬಾರದು?
1. ಮಕ್ಕಳ ಆರೋಗ್ಯವೇ ನಮಗೆ ಮುಖ್ಯ
2. ಮಕ್ಕಳಿಂದ ಸಾಮಾಜಿಕ ಅಂತರ ಪಾಲನೆ ಕಷ್ಟ
3. ದಿನದಿಂದ ದಿನಕ್ಕೆ ಸೋಂಕು ಹೆಚ್ಚುತ್ತಲೇ ಇದೆ
4. ಸಾವಿನ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ
5. ಮಕ್ಕಳಿಂದ ಮನೆಯವರಿಗೂ ಹರಡಿದರೆ ಕಷ್ಟ
6. ಮೊದಲು ಲಸಿಕೆ ಬರಲಿ, ಅನಂತರ ನೋಡೋಣ
ಶಾಲೆ ಏಕೆ ಆರಂಭಿಸಬೇಕು?
1. ಮಕ್ಕಳು ಬಾಲ ಕಾರ್ಮಿಕರಾಗುತ್ತಿದ್ದಾರೆ
2. ಬಾಲ್ಯ ವಿವಾಹಕ್ಕೂ ಕಾರಣವಾಗುತ್ತಿದೆ
3. ಮೊಬೈಲ್ ಚಟ ಬೆಳೆಸಿಕೊಳ್ಳುತ್ತಿದ್ದಾರೆ
4. ಕಲಿತದ್ದನ್ನು ಮರೆಯುತ್ತಿದ್ದಾರೆ
5. ಮಕ್ಕಳ ಜ್ಞಾನಾರ್ಜನೆ ಕಡಿಮೆಯಾಗುತ್ತಿದೆ
6. ಆನ್‌ಲೈನ್ ಶಿಕ್ಷಣಕ್ಕೆ ನೆಟ್‌ವರ್ಕ್ ಸಮಸ್ಯೆ
ಆನ್‌ಲೈನ್ ತರಗತಿಗಳು ಎಲ್ಲರಿಗೂ ಸರಿ ಹೋಗುವುದಿಲ್ಲ. 1ನೇ ತರಗತಿಯ ಮಕ್ಕಳಿಗೆ ಮುಖ್ಯವಾಗಿ ಅಕ್ಷರ ಜ್ಞಾನ ಸರಿಯಾಗಿ ಆಗದೆ ಇದ್ದರೆ ಮುಂದಿನ ತರಗತಿಗಳಲ್ಲಿ ತುಂಬಾ ತೊಂದರೆ ಆಗುತ್ತದೆ.
– ಲೂಸಿ ಪಿಂಟೊ, ಶಿಕ್ಷಕಿ, ದಕ್ಷಿಣ ದಕ್ಷಿಣ ಕನ್ನಡ
ಈ ಶೈಕ್ಷಣಿಕ ವರ್ಷವನ್ನು ಶೂನ್ಯ ವರ್ಷವಾಗಿ ಪರಿಗಣಿಸಬೇಕು. 10ನೇ ತರಗತಿ ಮತ್ತು 12ನೇ ತರಗತಿಗಳಿಗೆ ಮಾತ್ರ ಪಾಠ ನಡೆಸಿ ಪರೀಕ್ಷೆ ನಡೆಸುವುದು ಉತ್ತಮ.
– ರಾಜಾರಾಮ್, ಶಿಕ್ಷಕ, ಉಡುಪಿ
ಮಕ್ಕಳು ಇಡೀ ದಿನ ಮಾಸ್ಕ್ ಧರಿಸುವುದು, ಆಗಾಗ ಸ್ಯಾನಿಟೈಸರ್ ಉಪಯೋಗಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತಹ ನಿಯಮಗಳನ್ನು ಪಾಲನೆ ಮಾಡುವಷ್ಟು ಪ್ರೌಢರಾಗಿರುವುದಿಲ್ಲ.
– ಪ್ರೇಮಾ, ದಕ್ಷಿಣ ಕನ್ನಡ
ವಿದ್ಯಾಗಮವನ್ನು ಎಲ್ಲ ಶಾಲೆಗಳಿಗೆ ವಿಸ್ತರಿಸಬೇಕು. 4ನೇ ತರಗತಿಯಿಂದ ಮೇಲ್ಪಟ್ಟವರು ದಿನಕ್ಕೆ ಒಂದು ತರಗತಿಗಾಗಿ ಮಾತ್ರ ಶಾಲೆಗೆ ಬರುವಂತೆ ಮಾಡಬೇಕು. ಶಾಲಾ ಆವರಣದಲ್ಲಿ ಸೂಕ್ತ ವ್ಯವಸ್ಥೆ ಅಳವಡಿಸಿಕೊಳ್ಳಬೇಕು.
– ದಿಲೀಪ್ ಕುಮಾರ್ ಎಸ್., ದಕ್ಷಿಣ ಕನ್ನಡ
ಕೊರೊನಾ ನಿಯಂತ್ರಣಕ್ಕೆ ಬಂದ ಬಳಿಕ ಸುರಕ್ಷಾ ಕ್ರಮಗಳೊಂದಿಗೆ ಶಾಲೆ ಪ್ರಾರಂಭಿಸಬೇಕು.
– ಎ.ಪಿ. ಷಡ್ಜಯ್, ಕಡೂರು (ವಿದ್ಯಾರ್ಥಿ)
ತರಗತಿ ಆರಂಭಿಸಿದರೂ ಪೋಷಕರು ಭಯಪಡುವಂಥ ಸ್ಥಿತಿ ನಿರ್ಮಾಣವಾಗಿದೆ. ಈಗಿರುವ ರೀತಿಯಲ್ಲಿ ವಿದ್ಯಾಗಮವನ್ನು ಮತ್ತಷ್ಟು ಸುಧಾರಣೆಯೊಂದಿಗೆ ನಡೆಸಿದರೆ ಸೂಕ್ತ.
– ಮಧುಕರ, ಹೆರಂಜಾಲು
ಆನ್‌ಲೈನ್ ತರಗತಿಯಿಂದ ಮಕ್ಕಳು ಹಾಳಾಗುತ್ತಾರೆ. ಮಕ್ಕಳ ಕೈಗೆ ಫೋನ್ ಕೊಟ್ಟರೆ ದುರುಪಯೋಗ ಮಾಡಿಕೊಳ್ಳುತ್ತಾರೆ.
– ರಾಮಣ್ಣ ಭಜಂತ್ರಿ, ಗದಗ (ಕೂಲಿ ಕಾರ್ಮಿಕ)
ಭವಿಷ್ಯದ ದೃಷ್ಟಿಯಿಂದ 9ರಿಂದ 12ನೇ ವರೆಗಿನ ತರಗತಿಗಳನ್ನು ನಡೆಸಿದರೆ ಒಳಿತು. ಅದೂ ಸರಿಯಾದ ಸುರಕ್ಷಾ ಕ್ರಮಗಳೊಂದಿಗೆ.
-ವಿನಯ್, ತುಮಕೂರು (ಉದ್ಯಮಿ)
ಈ ವರ್ಷ ಶೈಕ್ಷಣಿಕ ವರ್ಷವನ್ನು ರದ್ದು ಮಾಡಿ ಮುಂದಿನ ವರ್ಷ ಪ್ರಾರಂಭ ಮಾಡುವುದು ಒಳ್ಳೆಯದು ಅನ್ನಿಸುತ್ತದೆ.
– ಮಲ್ಲಣ್ಣ , ಕಲಬುರಗಿ (ಕೃಷಿಕ)
ಒಂದು ವರ್ಷ ಶಾಲೆ ಇಲ್ಲದಿದ್ದರೂ ಪರವಾಗಿಲ್ಲ. ಸಾಧ್ಯವಾದಷ್ಟು ಮನೆಯಲ್ಲೇ ಇದ್ದು ತಿಳಿದಷ್ಟನ್ನು ಅಭ್ಯಾಸ ಮಾಡಲಿ.
-ಡಾ| ಅಶೋಕ್ ದಿನ್ನಿಮನಿ, ಬಾಗಬಾಗಲಕೋಟೆ (ವೈದ್ಯ)